ನವದೆಹಲಿ: ಯುಎಇಯಿಂದ ಆಗಮಿಸುವ ಚಾರ್ಟರ್ ವಿಮಾನಗಳ ಲ್ಯಾಂಡಿಂಗ್ಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಇಲ್ಲದಿದ್ದರೆ ಅನುಮತಿ ನೀಡಬಾರದು ಎಂದು ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ (ಎಎಐ) ತಿಳಿಸಿದೆ.
"ಯುಎಇಯಿಂದ ಭಾರತಕ್ಕೆ ಬರುವ ಚಾರ್ಟರ್ ವಿಮಾನಗಳು ತಮ್ಮ ಕಾರ್ಯಾಚರಣೆಗೆ ಅಗತ್ಯವಾದ ಭಾರತೀಯ ರಾಜ್ಯ ಅನುಮೋದನೆಯನ್ನು ಹೊಂದಿಲ್ಲ ಎಂದು ಗಮನಿಸಲಾಗಿದೆ" ಎಂದು ಡಿಜಿಸಿಎ ಎಎಐಗೆ ಬರೆದ ಪತ್ರದಲ್ಲಿ ತಿಳಿಸಿದೆ.
"ಇದನ್ನು ಗಮನದಲ್ಲಿಟ್ಟುಕೊಂಡು, ಯುಎಇಯ ವಿಮಾನ ನಿಲ್ದಾಣಗಳಿಂದ ನಿರ್ಗಮಿಸುವ ಮೊದಲು ವಿಮಾನಯಾನ ಸಂಸ್ಥೆಯು ಸಂಬಂಧಪಟ್ಟ ರಾಜ್ಯ ಸರ್ಕಾರದ ಅನುಮೋದನೆಯನ್ನು ವಾಯು ಸಂಚಾರ ನಿಯಂತ್ರಣಕ್ಕೆ (ಎಟಿಸಿ) ಸಲ್ಲಿಸಬೇಕು ಎಂದು ನಿರ್ಧರಿಸಲಾಗಿದೆ" ಎಂದು ಪತ್ರದಲ್ಲಿ ಹೇಳಲಾಗಿದೆ.
"ಈ ಅನುಮೋದನೆಯನ್ನು ಅವರಿಗೆ ನೀಡದ ಹೊರತು ಎಟಿಸಿ ವಿಮಾನದ ಆಗಮನವನ್ನು ಅನುಮತಿಸುವುದಿಲ್ಲ" ಎಂದು ಡಿಜಿಸಿಎ ಸ್ಪಷ್ಟವಾಗಿ ವಿಮಾನಯಾನ ಸಂಸ್ಥೆಗಳಿಗೆ ತಿಳಿಸಿದೆ.