ಚೆನ್ನೈ: ಆಲ್ ಇಂಡಿಯಾ ಕೋಟಾ (AIQ) ಅಡಿ ಮೆಡಿಕಲ್ ಸೀಟಿನಲ್ಲಿ ಒಬಿಸಿಯವರಿಗೆ ಮೀಸಲು ನೀಡುವ ಕುರಿತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ನೀಡಿರುವ ನಿರ್ದೇಶನವನ್ನ ಪಾಲಿಸುವಂತೆ ಹಾಗೂ ಈ ಸಂಬಂಧ ಸಂಬಂಧಪಟ್ಟ ಇಲಾಖೆಗೆ ಸೂಚನೆ ನೀಡುವಂತೆ ಸ್ಟಾಲಿನ್ ಅವರು ಪ್ರಧಾನಿಗಳನ್ನ ಒತ್ತಾಯಿಸಿದ್ದಾರೆ.
ಮೆಡಿಕಲ್ ಪ್ರವೇಶಕ್ಕಾಗಿ ತಮಿಳುನಾಡಿನಲ್ಲಿ ಆಲ್ ಇಂಡಿಯಾ ಕೋಟಾ (AIQ)ದಲ್ಲಿ ಒಬಿಸಿ ಮೀಸಲಾತಿ ನೀಡುವ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸಮಿತಿಯನ್ನು ರಚಿಸುವಂತೆ ನ್ಯಾಯಾಲಯ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ. ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿ ಕೇಂದ್ರ, ರಾಜ್ಯ ಮತ್ತು ವೈದ್ಯಕೀಯ ಮಂಡಳಿಯ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯನ್ನು ಮೂರು ತಿಂಗಳೊಳಗಾಗಿ ರಚಿಸಬೇಕು ಎಂದು ಅವರು ಪ್ರಧಾನಿ ಅವರನ್ನ ಒತ್ತಾಯಿಸಿದ್ದಾರೆ ಎಂದು ಡಿಎಂಕೆ ಪ್ರಕಟಣೆ ತಿಳಿಸಿದೆ.
ಆಲ್ ಇಂಡಿಯಾ ಕೋಟಾ (AIQ) ವೈದ್ಯಕೀಯ ಸ್ಥಾನಗಳಲ್ಲಿ ಒಬಿಸಿ ಮೀಸಲಾತಿ ನೀಡುವಂತೆ ಕೇಂದ್ರದ ಮೇಲೆ "ಒತ್ತಡ ಹೇರಲು" ಸಹಕಾರ ಕೋರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಸೇರಿದಂತೆ ದೇಶದ ಉನ್ನತ ರಾಜಕೀಯ ನಾಯಕರ ಜೊತೆಗೂ ಸ್ಟಾಲಿನ್ ಕಳೆದ ವಾರ ಚರ್ಚೆ ನಡೆಸಿದ್ದರು.