ಚೆನ್ನೈ: ನಟ ಮತ್ತು ಡಿಎಂಡಿಕೆ ಪಕ್ಷದ ಅಧ್ಯಕ್ಷ ವಿಜಯಕಾಂತ್ ಮಂಗಳವಾರ ರಾತ್ರಿ ಚೆನ್ನೈನ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಆರ್ತ್ರೋಪೆಡಿಕ್ಸ್ ಆ್ಯಂಡ್ ಟ್ರಾಮಾಟಾಲಜಿ (ಎಂಐಒಟಿ) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪಕ್ಷವು ಪ್ರಕಟಣೆಯಲ್ಲಿ ತಿಳಿಸಿದೆ.
ಅವರು ಆರೋಗ್ಯವಾಗಿದ್ದಾರೆ. ಆರೋಗ್ಯ ಸ್ಥಿತಿಯ ಬಗೆಗಿನ ವದಂತಿಗಳನ್ನು ನಂಬಬೇಡಿ ಎಂದು ಡಿಎಂಡಿಕೆ ಹೇಳಿಕೆಯಲ್ಲಿ ತಿಳಿಸಿದೆ. ವೈದ್ಯಕೀಯ ತಪಾಸಣೆಗಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅವರನ್ನು ಬಿಡುಗಡೆ ಮಾಡಲಾಗುವುದು ಅಂತ ಎಂಐಒಟಿ ಆಸ್ಪತ್ರೆ ಮಾಹಿತಿ ನೀಡಿದೆ.
ಸೆಪ್ಟೆಂಬರ್ 22 ರಂದು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದ ವಿಜಯಕಾಂತ್, ಇದೇ ಆಸ್ಪತ್ರೆಯಲ್ಲಿ ಸುಮಾರು ಹತ್ತು ದಿನಗಳವರೆಗೆ ಚಿಕಿತ್ಸೆ ಪಡೆದಿದ್ದರು. ಪತ್ನಿ ಪ್ರೇಮಲತಾ ವಿಜಯಕಾಂತ್ ಕೂಡ ಕೋವಿಡ್ ಸೋಂಕಿನ ನಂತರ ಇದೇ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಯ ಬಳಿಕ ಅವರನ್ನು ಅಕ್ಟೋಬರ್ 2 ರಂದು ಬಿಡುಗಡೆ ಮಾಡಲಾಗಿತ್ತು.
ವಿಜಯಕಾಂತ್ ಅವರ ಪಕ್ಷದ ಮುಖಂಡರು ಮತ್ತು ಹಿತೈಷಿಗಳು ತಮ್ಮ ನಾಯಕ ಶೀಘ್ರ ಗುಣಮುಖರಾಗಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾರೈಸುತ್ತಿದ್ದಾರೆ. ವಿಜಯಕಾಂತ್ ಕೊನೆಯ ಬಾರಿಗೆ ಅವರ ಮಗ ಷಣ್ಮುಗ ಪಾಂಡಿಯನ್ ಅವರ ಚೊಚ್ಚಲ ಚಿತ್ರ ಸಗಪ್ಥಮ್ ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.