ಪಾಟ್ನಾ: ಬಿಹಾರ ರಾಜ್ಯ ಕೋವಿಡ್-19 ಸಾಂಕ್ರಾಮಿಕ ರೋಗದ ಹೊರತಾಗಿಯೂ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 57.05 ರಷ್ಟು ಮತದಾನ ದಾಖಲಿಸಿದೆ. ಇದು 2015 ಕ್ಕೆ ಹೋಲಿಸಿದರೆ ಸ್ವಲ್ಪ ಹೆಚ್ಚಾಗಿದೆ.
2015ರಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು ಮತದಾನ ಪ್ರಮಾಣ ಶೇ 56.66 ರಷ್ಟಿತ್ತು ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ತಿಳಿಸಿವೆ. ಇನ್ನು ಈ ವರ್ಷ ಬಿಹಾರ ಚುನಾವಣೆಯಲ್ಲಿ ಮಹಿಳಾ ಮತದಾನ ಪ್ರಮಾಣ ಶೇ 59.69 ರಷ್ಟಿದ್ದು, ಪುರುಷ ಮತದಾರರಿಂದ ಶೇ. 54.68 ರಷ್ಟು ಮತದಾನವಾಗಿದೆ. 2015 ಕ್ಕೆ ಹೋಲಿಸಿದರೆ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿದೆ.
ಮೊದಲ ಹಂತದಲ್ಲಿ ಶೇ. 55.68 ಮತ್ತು ಎರಡನೇ ಹಂತದಲ್ಲಿ ಶೇ. 55.70 ಮತದಾನವಾಗಿದ್ದು, ಇದಕ್ಕೆ ಹೋಲಿಸಿದರೆ ನವೆಂಬರ್ 7 ರಂದು ನಡೆದ 3ನೇ ಹಂತದ ಚುನಾವಣೆಯಲ್ಲಿ ಪ್ರತಿಶತ 60 ರಷ್ಟು ಮತದಾನವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ 57.33 ರಷ್ಟು ಮತದಾನವಾಗಿದೆ. ಇನ್ನು ಮೂರನೇ ಹಂತದಲ್ಲಿ ಚುನಾವಣೆ ನಡೆದ ಯಾವುದೇ ಕ್ಷೇತ್ರದಲ್ಲಿ ಮರು ಮತದಾನಕ್ಕೆ ಆದೇಶ ಹೊರಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.