ನವದೆಹಲಿ: ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ಸಂಸತ್ನ ಉಭಯ ಸದನಗಳಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದ್ದು, ಹಲವರ ಅಮಾನತಿಗೂ ಕಾರಣವಾಗಿತ್ತು.
ಇದೀಗ ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರಾಜಧಾನಿ ಪೊಲೀಸರು ಸಂಪೂರ್ಣ ವರದಿ ತಯಾರಿಸುತ್ತಿದ್ದು, ಮುಂದಿನ ವಾರ ಸಂಪೂರ್ಣ ವರದಿಯನ್ನ ಗೃಹ ಇಲಾಖೆಗೆ ಒಪ್ಪಿಸುವ ಸಾಧ್ಯತೆ ಇದೆ. ಈಗಾಗಲೇ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಿಎಫ್ಐನ ದೆಹಲಿ ಮುಖ್ಯಸ್ಥ ಪ್ರರ್ವೇಜ್ ಅಹಮ್ಮದ್, ಕಾರ್ಯದರ್ಶಿ ಮೊಹಮ್ಮದ್ ಇಲಿಯಾಸ್ ಎಂಬುವವರನ್ನ ಬಂಧಿಸಿ ಜೈಲಿಗೆ ಅಟ್ಟಿದೆ. ಈ ಇಬ್ಬರು ಹಿಂಸಾಚಾರಕ್ಕೆ ಅನುದಾನ ಒದಗಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ವಿಶೇಷ ಎಂದರೆ ಎಸ್ಡಿಪಿಐ ಪಕ್ಷದಿಂದ ಇಲಿಯಾಸ್ 2020 ರ ದೆಹಲಿ ವಿಧಾನಸಭೆ ಚುನಾವಣೆಗೆ ಕಾರ್ವಾಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ. ಇನ್ನು ಬೇಹುಗಾರಿಕಾ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಮಾಡಿದ ಆರೋಪಿ ಸಲ್ಮಾನ್ ಅಲಿಯಾಸ್ ನನ್ಹೆ ಅವನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಹಿಂಸಾಚಾರದ ಹಿಂದಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದೆ.
ಇನ್ನೊಂದೆಡೆ ಸಂಸತ್ನಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ಹಿಂಸಾಚಾರಕ್ಕೆ ಕಾರಣ ಯಾರು ಎಂಬ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದ್ದು, ತಪ್ಪಿತಸ್ಥರನ್ನ ಯಾವುದೇ ಕಾರಣಕ್ಕೂ ಸುಮ್ಮನೇ ಬಿಡುವುದಿಲ್ಲ ಎಂದು ಘೋಷಿಸಿದ್ದಾರೆ.