ನವದೆಹಲಿ: ಕಡ್ಡಾಯವಾದ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ನಂತರ ತಬ್ಲಿಘಿ ಜಮಾತ್ ಸದಸ್ಯರನ್ನು ಮುಕ್ತವಾಗಿ ಹೊರ ಹೋಗಲು ಬಿಡಬೇಕು ಎಂದು ಅಲ್ಪಸಂಖ್ಯಾತರ ಆಯೋಗ ದೆಹಲಿ ಆರೋಗ್ಯ ಸಚಿವರನ್ನು ಕೇಳಿದೆ.
ನವದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರಿಗೆ ಪತ್ರ ಬರೆದಿರುವ ದೆಹಲಿ ಅಲ್ಪಸಂಖ್ಯಾತ ಆಯೋಗ , ನಿಜಾಮುದ್ದೀನ್‌ನ ಮರ್ಕಜ್‌ನಿಂದ ಕ್ವಾರಂಟೈನ್ ಶಿಬಿರಗಳಿಗೆ ಕರೆತಂದ ಜನರು ಸೋಮವಾರಕ್ಕೆ 28 ದಿನಗಳನ್ನು ಪೂರ್ಣಗೊಳಿಸಲಿದ್ದಾರೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ಕೊರೊನಾ ಶಂಕಿತರ ಕ್ವಾರೆಂಟೈನ್‌ಗೆ ಎರಡು ಪಟ್ಟು ಕಡ್ಡಾಯ ಅವಧಿಯಾಗಿದೆ ಎಂದು ತಿಳಿಸಿದೆ
ಸೋಂಕು ಇಲ್ಲದಿದ್ದರೂ 14 ದಿನಗಳಿಗೂ ಹೆಚ್ಚ ಕಾಲ ಇರಿಸಿಕೊಂಡಿದ್ದು ಅನಗತ್ಯವಾಗಿ ಬಂಧನದಲ್ಲಿಡಲಾಗಿದೆ. ಇತರೆ ಕ್ವಾರಂಟೈನ್ ಕೇಂದ್ರದಲ್ಲಿರುವವರಲ್ಲಿ ಸೋಂಕು ಕಾಣಿಸಿಕೊಳ್ಳದಿದ್ದರೆ 14 ದಿನದ ಅವಧಿ ಮುಗಿದ ನಂತರ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಯೋಗದ ಅಧ್ಯಕ್ಷ ಜಾಫ್ರುಲ್ ಇಸ್ಲಾಂ ಖಾನ್ ಪತ್ರದಲ್ಲಿ ತಿಳಿಸಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲಿ 28 ದಿನಗಳನ್ನು ಕಳೆದ ಮತ್ತು ಸೊಂಕು ಕಾಣಸಿಕೊಳ್ಳದ ಎಲ್ಲ ಜನರಿಗೆ ಮನೆಗೆ ಹೋಗಲು ಅವಕಾಶ ನೀಡಬೇಕು ಅಥವಾ ಲಾಕ್‌ಡೌನ್ ಮುಂದುವರಿಯುತ್ತಿರುವಾಗ ದೆಹಲಿಯಲ್ಲಿ ಬೇರೆಲ್ಲಿಯಾದರೂ ವಾಸಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ರಂಜಾನ್ ಹಿನ್ನೆಲೆಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿರುವ ಹೆಚ್ಚಿನ ಮುಸ್ಲಿಮರು ಉಪವಾಸ ಮಾಡುತ್ತಿದ್ದಾರೆ. ಅಲ್ಲಿ ಸೌಲಭ್ಯಗಳ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದಿದೆ. ಅಲ್ಲದೆ ಎರಡು ಪಟ್ಟು ಕ್ವಾರಂಟೈನ್ ಅವಧಿ ಮುಂದುವರೆಸಿರುವುದ ಮುಸ್ಲಿಂ ಸಮುದಾಯದಲ್ಲಿ ಕೆಟ್ಟ ಅಭಿಪ್ರಾಯ ಮೂಡಿಸುತ್ತದೆ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲೂ ಕಾರಣವಾಗಬಹುದು ಎಂದಿದೆ.