‘ಜಗತ್ತನ್ನು ಒಂದು ದೇಹ ಎಂದುಕೊಂಡರೆ, ದೆಹಲಿ ಅದರ ಆತ್ಮ.’
ಕವಿ ಮಿರ್ಜಾ ಗಾಲಿಬ್ ಕಾಲಾತೀತವಾದ ಈ ಸಾಲುಗಳನ್ನು ಬರೆದಾಗ, ದೆಹಲಿ ಒಂದು ಮಹತ್ವದ ಸ್ಥಳವಾಗಿ ಬೆಳೆಯುವ ಕುರಿತು ಭವಿಷ್ಯ ನುಡಿದಂತೆ ಇತ್ತು. ಮುಂಬರುವ ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೇಶದ ಕಣ್ಣು ಈಗ ಅದರ ಮೇಲೆ ನೆಟ್ಟಿದೆ. ರಾಷ್ಟ್ರಮಟ್ಟದಲ್ಲಿ ಮತ್ತು ದೆಹಲಿಯ ಹೃದಯಭಾಗದಲ್ಲಿಯೇ ಘಟಿಸುತ್ತಿರುವ, ಹಿಂದೆಂದೂ ಕಂಡು ಕೇಳರಿಯದ ಸಾಮಾಜಿಕ - ರಾಜಕೀಯ ಪ್ರಕ್ಷುಬ್ಧತೆಯ ಮಧ್ಯೆ, 70 ಸದಸ್ಯಬಲದ ದೆಹಲಿ ವಿಧಾನಸಭೆಗೆ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಪೌರತ್ವ ಮತ್ತು ಅಸ್ಮಿತೆ ಕುರಿತಾದ ಚರ್ಚೆಗಳಿಂದಾಗಿ ಜನ ಬೀದಿಗೆ ಇಳಿದಿದ್ದು ಇದೇ ವೇಳೆ ಬಹುಕಾಲದ ನಂತರ ದೇಶದ ಆರ್ಥಿಕತೆ ಭಾರಿ ಕುಸಿತ ಕಂಡಿದೆ. ದೆಹಲಿ ಚುನಾವಣೆ ‘ಸ್ಥಳೀಯ ವಿದ್ಯಮಾನ’ ಎಂದು ಬಿಂಬಿತಗೊಂಡಿದ್ದರೂ, ಅನಿವಾರ್ಯವಾಗಿ ಈ ನಿರೂಪಗಳ ನಡುವೆ ಹಾದು ಹೋಗಬೇಕಿದೆ. ದೇಶ ಎದುರಿಸುತ್ತಿರುವ ಇಂತಹ ಗೊಂದಲಗಳಿಗೆ ಕನ್ನಡಿ ಹಿಡಿದಂತೆ ಚುನಾವಣಾ ಫಲಿತಾಂಶ ಹೊರಹೊಮ್ಮುವ ನಿರೀಕ್ಷೆಗಳು ಇವೆ.
ಈ ಬಾರಿಯ ದೆಹಲಿ ಚುನಾವಣೆಗೆ ಏಕೆ ಭಾರೀ ಮಹತ್ವ?
ದೆಹಲಿ ದೇಶದ ರಾಜಕಾರಣದ ಕೇಂದ್ರ ಬಿಂದು ಎನಿಸಿಕೊಂಡಿರುವುದರಿಂದ ಮತ್ತು ‘ರಾಷ್ಟ್ರೀಯ ಮಾಧ್ಯಮ’ಗಳಿಗೆ ಸಮೀಪ ಇರುವುದರಿಂದ ಅಲ್ಲಿನ ಚುನಾವಣೆಗಳು ಬಹುತೇಕ ಅಸಮರ್ಪಕ ರಾಜಕೀಯ ತೂಕದ ಹೊರತಾಗಿಯೂ ಸದಾ ಸಾಂಕೇತಿಕ ಮೌಲ್ಯಕ್ಕೆ ಸೀಮಿತವಾಗಿ ಇರುತ್ತಿದ್ದವು, ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆಯ ಮಹತ್ವ ಎಂದರೆ ಮೊದಲನೆಯದಾಗಿ ಅದು ಕೇವಲ ‘ಸಾಂಕೇತಿಕ’ ಎಂಬ ಮಿತಿಯ ಆಚೆಗೆ ದೇಶದ ಮತದಾನದ ನಡವಳಿಕೆಗಳ ಬಗೆಗೆ ಇರುವ ಕಲ್ಪಿತ ಸಿದ್ಧಾಂತಗಳನ್ನು ಪರೀಕ್ಷಿಸಲು ಹೊರಟಂತೆ ಇದೆ. ಎರಡನೆಯದಾಗಿ, ಒಂದು ರೀತಿಯ 'ಪರ್ಯಾಯ ರಾಜಕಾರಣ'ದ ಕಾರ್ಯಸಾಧ್ಯತೆಯನ್ನು ನಿರ್ಧರಿಸಲಿದೆ ಹಾಗೂ ಕೊನೆಯದಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಒಂದು ಭಾಷ್ಯ ಬರೆಯಲು ತೊಡಗಿದಂತೆ ಇದೆ.
ಪ್ರತಿ ಚುನಾವಣೆಯಲ್ಲಿಯೂ ಭಿನ್ನವಾಗಿ ತೋರುವ ದೆಹಲಿ ಮತದಾರನ ಆದ್ಯತೆಗಳನ್ನು ಗಮನಿಸಿದರೆ ಅಲ್ಲಿನ ಮತದಾರರು ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳ ನಡುವೆ ವ್ಯತ್ಯಾಸ ಕಂಡುಕೊಂಡಿದ್ದಾರೆ ಎನ್ನಬಹುದು. ಇದರರ್ಥ ದೆಹಲಿಯ ಮತದಾರರು ‘ಸ್ಥಳೀಯ’ ಮತ್ತು ‘ರಾಷ್ಟ್ರಮಟ್ಟದ’ ಸಮಸ್ಯೆಗಳ ಕುರಿತು ಪ್ರತ್ಯೇಕ ಧೋರಣೆ ಹೊಂದಿದ್ದಾರೆ ಎಂಬುದಾಗಿದೆ. ತಮ್ಮ ಪ್ರಚಾರ ಕಾರ್ಯತಂತ್ರಗಳಲ್ಲಿ ‘ಸ್ಥಳೀಯ’ ಕಾರ್ಯಕ್ಷಮತೆಯ ಬಗ್ಗೆ ಗಮನ ಹರಿಸುವುದರಿಂದಾಗಿ ಆಡಳಿತಾರೂಢ ಆಮ್ ಆದ್ಮಿ ( ಎ ಎ ಪಿ ) ರೀತಿಯ ಪಕ್ಷಗಳಿಗೆ ಈ ನಡವಳಿಕೆ ಉತ್ತಮ ಫಲ ನೀಡಬಲ್ಲದು ಎಂದು ತೋರುತ್ತದೆ. ಆದರೂ ಭಾರತೀಯ ಜನತಾ ಪಕ್ಷ ( ಬಿ ಜೆ ಪಿ ) ಕೇಂದ್ರ ಸರ್ಕಾರದ ‘ಕಾರ್ಯದಕ್ಷತೆ’ ಬಗ್ಗೆ ಪದೇ ಪದೇ ಡಂಗುರ ಹೊಡೆಯುವ ಮೂಲಕ ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಕೆಲಸ ಕಾರ್ಯಗಳನ್ನು ಸಾಕ್ಷಿಯಾಗಿ ನೀಡಿ ಮತ ಪಡೆಯಲು ಹೊರಟಿದೆ. ಆ ಮೂಲಕ ಆಮ್ ಆದ್ಮಿ ಪಕ್ಷ ಗುರುತಿಸಿರುವ ಸ್ಥಳೀಯ- ರಾಷ್ಟ್ರೀಯ ವ್ಯತ್ಯಾಸಗಳಿಗೆ ಭಂಗ ತರಲು ಯತ್ನಿಸುತ್ತಿದೆ. ಕೇಂದ್ರ ಮತ್ತು ರಾಜ್ಯದ ನಡುವೆ ಅಡೆತಡೆ ಇಲ್ಲದ ಆದೇಶ ರವಾನಿಸಲು ಏಕೀಕೃತ ಬಲಿಷ್ಠ ನಾಯಕತ್ವ ರೂಪಿಸುವ ಅಗತ್ಯಕ್ಕೆ ಒತ್ತು ನೀಡುತ್ತಿದೆ. ಕೇಂದ್ರದ ಆಜ್ಞಾನುಸಾರ ಹೊಂದಾಣಿಕೆ ಮಾಡಿಕೊಂಡರೆ ಮಾತ್ರ ‘ದೆಹಲಿಯ ಅಗತ್ಯಗಳು ಮತ್ತು ಸಮಸ್ಯೆಗಳನ್ನು’ ಅರ್ಥಪೂರ್ಣವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಬಿಜೆಪಿ ದೆಹಲಿಯ ಮತದಾರರಿಗೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದೆ. ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಪಕ್ಷದ ಈ ಹಿಂದಿನ ಸಾಮರ್ಥ್ಯದತ್ತ ನಿರಂತರ ಗಮನ ಹರಿಸುತ್ತಿದ್ದರೆ ಬಿಜೆಪಿ ಮತ್ತೆ ಮತ್ತೆ ರಾಷ್ಟ್ರೀಯ ಸಂಗತಿಗಳತ್ತ ಮತದಾರರನ್ನು ಹುರಿಗೊಳಿಸುತ್ತಿದ್ದು ಎ ಎ ಪಿ ಮತ್ತು ಕಾಂಗ್ರೆಸ್ ‘ರಾಷ್ಟ್ರೀಯ ಹಿತಾಸಕ್ತಿಗೆ’ ಧಕ್ಕೆ ಉಂಟು ಮಾಡುತ್ತವೆ ಎನ್ನುತ್ತಿದೆ.
‘ವಿಕಾಸ್ ವಿನಾ ಅಸ್ಮಿತೆ ರಾಜಕಾರಣ ಇಲ್ಲ’: ‘ ಪರ್ಯಾಯ ರಾಜಕಾರಣ’ದ ಸವಾಲುಗಳು
ಕಟ್ಟಕಡೆಗೆ ಚುನಾವಣಾ ರಾಜಕೀಯ ಎಂಬುದು ಹೆಚ್ಚೆಂದರೆ ಅಂಕಿ - ಸಂಖ್ಯೆಯ ಆಟ ಮಾತ್ರ. ಆದಕ್ಕೆ ‘ವರ್ಗ’ ಅಥವಾ ಅದರ ಕನಿಷ್ಠ ರೂಪವೊಂದು ಬೆಲೆ ತೆರುತ್ತದೆ. ವಿಕಾಸ ಅಥವಾ ಅಭಿವೃದ್ಧಿ ಎಂಬುದು ವರ್ಗಗಳನ್ನು ಒಗ್ಗೂಡಿಸಬಲ್ಲ ಮತ್ತು ಅಸ್ಮಿತೆ ಆಧಾರಿತ ಭೇದ- ಭಾವಗಳನ್ನು ಇಲ್ಲವಾಗಿಸುವ ಆ ಬಗೆಯ ಮಾಯಾವಿ ಪದ. ‘ಗರೀಬಿ ಹಠಾವೋ’ ಅಥವಾ ‘ಸಾಬ್ ಕಾ ಸಾಥ್, ಸಾ ಕಾ ವಿಕಾಸ್’ ಎಂಬಂತಹ ದೇಶ- ಕಾಲ ಮೀರಿದ ಘೋಷಣೆಗಳನ್ನು ಪ್ರಯೋಗಿಸುವುದು ಇಂತಹ ದೂರದೃಷ್ಟಿ ಮತ್ತು ಕಾರ್ಯತಂತ್ರವನ್ನು ಪ್ರತಿನಿಧಿಸುತ್ತದೆ. ಎ ಎ ಪಿ ಎಂಬುದು ಭಾರತೀಯ ರಾಜಕೀಯ ಪ್ರಯೋಗವೊಂದರ ಶಿಶು ಆಗಿದ್ದು, ದೇಶದ ರಾಜಕೀಯ ರಂಗದ ಅಡ್ಡಗೋಡೆಗಳೆನಿಸಿದ್ದ ಮೂವರು ‘ದುಷ್ಟ’ರನ್ನು ಹೊಡೆದೋಡಿಸಲು ದೇಶದ ನಾಗರಿಕ ಸಮಾಜದ ಒಂದು ಗುಂಪು ಕಂಡುಕೊಂಡ ಪರಿಹಾರ ಆಗಿತ್ತು ಎಂಬುದು ಮರೆಯಬಾರದ ಸಂಗತಿ. ಆ ಮೂವರು ದುಷ್ಟರು ಯಾರು ಎಂದರೆ ಮೊದಲನೆಯದು, ಹಣಬಲ, ಎರಡನೆಯದು ತೋಳ್ಬಲ. ಹಾಗೂ ಮೂರನೆಯದು ಕೌಟುಂಬಿಕ ನಂಟು ಅಥವಾ ವಂಶ ಪಾರಂಪರ್ಯ ರಾಜಕಾರಣ. 2010 ರಲ್ಲಿ ಹೊಸದಾಗಿ ರೂಪುಗೊಂಡ ಪಕ್ಷವೊಂದು ಸಾಧಿಸಿದ ಅದ್ಭುತ ಗೆಲುವು ಭಾರತದ ರಾಜಕಾರಣದ ಭಾಷೆಯನ್ನು ಹಣ ಆಧಾರಿತ ನುಡಿಗೆ ಬದಲಿಗೆ ಬದ್ಧತೆ ಆಧಾರಿತ ಸೊಲ್ಲಿಗೆ ಶಾಶ್ವತವಾಗಿ ಬದಲಿಸಿತು. ಕೆಡುಕಿನ ಸುತ್ತಲೂ ಲಂಗರು ಹಾಕಿರುವ ರಾಜಕೀಯದಲ್ಲಿ ಇಂತಹುದು ಪ್ರಾರಂಭ ಆಗಬೇಕಿತ್ತು. ಇದು ಎಷ್ಟರ ಮಟ್ಟಿಗೆ ಯಶಸ್ವಿ ಆಗಿದೆ ಅಥವಾ ಇಲ್ಲ ಎಂಬುದಕ್ಕಿಂತಲೂ ಅದೊಂದು ಆಮೂಲಾಗ್ರ ಬದಲಾವಣೆಯ ಆಟ ಎನಿಸಿಕೊಂಡಿದೆ. ಮುಖ್ಯವಾದ ಸಂಗತಿ ಎಂದರೆ ಎ ಎ ಪಿ ತನ್ನ ಬಹುನೆಲೆಯ ಅಭಿವೃದ್ಧಿ ಕಾರ್ಯಗಳ ಜೊತೆಗೆ ವಿವಿಧ ರಂಗುಗಳನ್ನು ಮೇಳೈಸಿ (rainbow coalition) ಸಮಾಜದ ಅನೇಕ ಲೋಪಗಳನ್ನು ಮುಚ್ಚಬಲ್ಲ ಸಾಮಾಜಿಕ ಮೈತ್ರಿಯನ್ನು ಯಶಸ್ವಿಯಾಗಿ ಸಾಧಿಸಿದೆ, ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಪಠಿಸುವ ಕೃಪಾ ಪೋಷಿತ ಜನಪ್ರಿಯತೆಯನ್ನು ಮೀರಿದ್ದಾಗಿದೆ ಇದು. ಸಮಾಜ ವಿಜ್ಞಾನಿಗಳಾದ ಅಮಿತ್ ಅಹುಜಾ ಮತ್ತು ಪ್ರದೀಪ್ ಚಿಬ್ಬರ್ ಅವರು ಮತದಾನದ ಮೂರು ವಿಭಿನ್ನ ‘ವ್ಯಾಖ್ಯಾನಗಳಿಂದ’ ಗುರುತಿಸಲಾದ ಮೂರು ವಿಶಾಲವಾದ ಸಾಮಾಜಿಕ ಗುಂಪುಗಳನ್ನು ಗುರುತಿಸುತ್ತಾರೆ, ಅದರಂತೆ ಸಾಮಾಜಿಕ- ಆರ್ಥಿಕ ಸ್ತರದ ತಳಭಾಗದಲ್ಲಿರುವ ಸಮೂಹಗಳು ಮತದಾನದ ಕಾರ್ಯವನ್ನು ತಮ್ಮ ‘ ಹಕ್ಕು ’ ಎಂದು ಭಾವಿಸುತ್ತವೆ. ಮಧ್ಯಮ ವರ್ಗ ಅದನ್ನು ರಾಜ್ಯದ ಸಂಪನ್ಮೂಲ ಲಭಿಸುವಂತೆ ಮಾಡಿಕೊಳ್ಳುವ ‘ ಸಾಧನ ‘ ಎಂದು ಪರಿಗಣಿಸುತ್ತದೆ. ಮತ್ತು ಮೇಲ್ಪದರದ ಮಂದಿ ‘ ನಾಗರಿಕ ಕರ್ತವ್ಯ ‘ ಎಂದು ತಿಳಿಯುತ್ತಾರೆ. ಮತದಾನದ ಈ ಮೂರು ರೇಖೆಗಳನ್ನು ಒಳಗೊಂಡ ಚುನಾವಣಾ ಲೆಕ್ಕಾಚಾರ ಎಷ್ಟು ದಿನಗಳ ಕಾಲ ಎ ಎ ಪಿ ಜೊತೆಗೆ ಮುಂದುವರಿಯಲಿದೆ ಎಂಬ ಪ್ರಶ್ನೆ ಇದೆ. ದೆಹಲಿಯ ಆಸ್ಪತ್ರೆಗಳು, ಶಾಲೆಗಳು, ನೀರು ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ತಾನು ಸಾಧಿಸಿರುವ ಮೈಲುಗಲ್ಲಿನ ಆಧಾರದಲ್ಲಿ ಎ ಎ ಪಿ ಮರು ಆಯ್ಕೆ ಬಯಸುತ್ತಿದೆ. ಆದರೆ ಸ್ವತಃ ದೆಹಲಿ ರಾಜ್ಯದೊಳಗೆ ನಡೆಯುತ್ತಿರುವ ಅಸ್ಮಿತೆ ಧ್ರುವೀಕರಣದ ವಿದ್ಯಮಾನಗಳಿಂದ ಅಭಿವೃದ್ಧಿಯ ಸಂಗತಿಗಳನ್ನು ಪ್ರತ್ಯೇಕಗೊಳಿಸಿ ಅದು ಯಶಸ್ವಿಯಾಗಿ ಮುಂದುವರಿಯಬಲ್ಲದೆ?
ಶಾಹೀನ್ ಬಾಗ್, ಜೆಎನ್‌ಯು, ಜಾಮಿಯಾ: ‘ಕೇಂದ್ರೀಕರಣ’ ಮರಳಲು ವೇದಿಕೆ ಸಜ್ಜು?
ರಾಷ್ಟ್ರಮಟ್ಟದಲ್ಲಿ ಘಟಿಸುತ್ತಿರುವ ನ ಭೂತೋ ನ ಭವಿಷ್ಯತಿ ಎಂಬಂತಹ ರಾಜಕೀಯ ಪ್ರಕ್ಷುಬ್ಧತೆಯ ನಡುವೆ ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಏರ್ಪಟ್ಟಿದೆ. ಜೆಎನ್‌ಯುವಿನಲ್ಲಿ ನಡೆದ ಶುಲ್ಕ ಹೆಚ್ಚಳ ವಿರೋಧಿ ಆಂದೋಲನದಿಂದ ಹಿಡಿದು ಸಿ ಎ ಎ - ಎನ್ ಆರ್ ಸಿ ವಿರೋಧಿ ಶಾಹೀನ್ ಬಾಗ್ ಸಂಘಟನೆಯವರೆಗೆ ಅನೇಕ ಮಹತ್ವದ ಘಟನೆಗಳು ದೆಹಲಿ ರಾಜ್ಯವನ್ನು ಕೇಂದ್ರೀಕರಿಸಿಕೊಂಡು ಗಿರಕಿ ಹೊಡೆಯುತ್ತಿವೆ. ಸಿ ಎ ಎ - ಎನ್ ಆರ್ ಸಿ ಮತ್ತು ‘ತುಕ್ಡೆ ತುಕ್ಡೆ ಗ್ಯಾಂಗ್’ ರೀತಿಯ ವಿವಾದಾತ್ಮಕ ವಿಷಯಗಳಿಂದ ದೂರ ಇರಲು ಎ ಎ ಪಿ ಹೆಚ್ಚು ಪ್ರಯತ್ನಿಸುತ್ತಿದ್ದರೆ, ಬಿಜೆಪಿ ಈ ಮುಖ್ಯ ಸಮಸ್ಯೆಗಳನ್ನೇ ಚುನಾವಣಾ ವಿಷಯ ಮಾಡಲು ಹವಣಿಸಿದೆ. ಎ ಎ ಪಿಯ ‘ಕಾರ್ಯಕ್ಷಮತೆ ಆಧಾರಿತ’ ಅಭಿಯಾನದ ವಿರುದ್ಧವಾಗಿ ಸಿ ಎ ಎ - ಎನ್ ಆರ್ ಸಿ ವಿರೋಧಿ ಪ್ರತಿಭಟನೆಗಳನ್ನು ‘ಬೆಂಬಲಿಸುವ’ ಅಥವಾ ಸ್ಪಷ್ಟವಾಗಿ ಖಂಡಿಸದ ಪಕ್ಷಗಳನ್ನು ಅವಶ್ಯ ‘ದೇಶ ವಿರೋಧಿಗಳು ಎಂದು ಅವಶ್ಯವಾಗಿ ಬಿಂಬಿಸುವ ನಿರೂಪದ ಮೊರೆ ಹೋಗುತ್ತದೆ ಬಿ ಜೆ ಪಿ. ಇನ್ನು ಸಿ ಎ ಎ - ಎನ್ ಆರ್ ಸಿ ಕಾನೂನಿನ ಅರ್ಹತೆ ಕುರಿತ ಚರ್ಚೆಗೆ ಮುಂದಾಗಲು ನಿರಾಕರಿಸಿರುವ ಎ ಎ ಪಿ, ಅಭಿವೃದ್ಧಿ ನೆಲೆಯ ತನ್ನ ವೈಫಲ್ಯ ಮರೆಮಾಚಲು ಬಿಜೆಪಿ ಕಂಡುಕೊಂಡಿರುವ ತಂತ್ರ ಇದು ಎಂದು ಕರೆಯುತ್ತದೆ. ಆದರೆ ಎ ಎ ಪಿ ಬಳಿ ಚುನಾವಣಾ ತಂತ್ರಕ್ಕಿಂತ ಮಿಗಿಲಾದ ಬೇರೆ ಏನಾದರೂ ಇದೆಯೇ ? ಯಾರಾದರೂ ಗಮನ ಹರಿಸಿದರೆ, 370ನೇ ವಿಧಿ ರದ್ದತಿಯಿಂದ ಹಿಡಿದು ಬಾಲಕೋಟ್ ವಾಯುದಾಳಿ ಕುರಿತಾದ ವಿವಾದದ ತನಕ ಕಳೆದ ಕೆಲವು ತಿಂಗಳುಗಳಿಂದ ರಾಷ್ಟ್ರವನ್ನು ಧ್ರುವೀಕರಿಸಲು ಯತ್ನಿಸುತ್ತಿರುವ ಕೆಲವು ಸೂಕ್ಷ್ಮ ವಿಷಯಗಳ ಬಗ್ಗೆ ಮತ್ತು ಜೆಎನ್‌ಯು, ಜಾಮಿಯಾ ವಿಶ್ವವಿದ್ಯಾಲಯಗಳ ಮೇಲಿನ 'ದಾಳಿ' ಹಾಗೂ ಶಾಹೀನ್ ಬಾಗ್ ಪ್ರತಿಭಟನೆಗಳಂತಹ ಇತ್ತೀಚಿನ ಸಂಗತಿಗಳವರೆಗೆ ಎ ಎ ಪಿ ಎಚ್ಚರದ ಹೆಜ್ಜೆ ಇರಿಸಿರುವುದು ಕಂಡು ಬರುತ್ತದೆ. ಬಿಜೆಪಿಯ ‘ಬಲಪಂಥೀಯ’ ಆಕ್ರಮಣಕಾರಿ ರಾಷ್ಟ್ರೀಯತೆ ಮತ್ತು ಅದಕ್ಕೆ ‘ಎಡ’ ಪಕ್ಷಗಳು ಮಾಡುವ ಟೀಕೆಗಳಿಂದ ಸಮಾನ ಅಂತರ ಕಾಯ್ದುಕೊಂಡಿರುವ ಎ ಎ ಪಿ, ಭಾರತೀಯ ರಾಜಕೀಯ ರಂಗದಲ್ಲಿ ಕಾಂಗ್ರೆಸ್ ಪಕ್ಷದ ಅವನತಿಯಿಂದ ಉಂಟಾಗಿರುವ ನಿರ್ವಾತವನ್ನು ತುಂಬುವ ಯತ್ನದಲ್ಲಿ ಇದೆ. ಕುತೂಹಲದ ಸಂಗತಿ ಎಂದರೆ, ಮತದಾನಕ್ಕೆ ಸಂಬಂಧಿಸಿದಂತೆ (ಕಳೆದ ನಾಲ್ಕು ಚುನಾವಣೆಗಳಲ್ಲಿ ಶೇ 30 - 35ರ ನಡುವೆ) ದೆಹಲಿಯಲ್ಲಿ ಕಳೆದ ಕೆಲವು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಗಮನಾರ್ಹ ಸ್ಥಿರತೆ ಕಾಯ್ದುಕೊಂಡಿದೆ, ಆದರೆ ಕಾಂಗ್ರೆಸ್ ನಾಟಕೀಯ ಕುಸಿತ ಕಂಡಿದೆ. 2003ರ ಚುನಾವಣೆಯಲ್ಲಿ ಶೇ 48.1ನಷ್ಟು ಇದ್ದ ಮತಗಳ ಪ್ರಮಾಣ 2015ರಲ್ಲಿ ಶೇ 9.7ಕ್ಕೆ ಕುಸಿದಿದೆ. ಈ ಬಾರಿ ಕಾಂಗ್ರೆಸ್ ‘ಶೀತಲ ಪ್ರಚಾರ'ದಲ್ಲಿ ತೊಡಗಿದ್ದು ಇದರ ಜೊತೆಗೆ ಪಕ್ಷದ ತಾರಾ ವರ್ಚಸ್ಸಿನ ಮುಖಗಳು ಕಾಣೆ ಆಗಿವೆ, ಅಂತಿಮವಾಗಿ ಕಾಂಗ್ರೆಸ್ ಮತಗಳು ಮತ್ತೊಮ್ಮೆ ಎ ಎ ಪಿ ಬುಟ್ಟಿಗೆ ಬೀಳುವ ಲಕ್ಷಣಗಳು ಕಂಡುಬರುತ್ತಿವೆ. ಇದಲ್ಲದೆ, ಬಿಜೆಪಿ ಸೃಜಿಸಿರುವ ‘ಧಾರ್ಮಿಕ ಧ್ರುವೀಕರಣ’ದ ವಾತಾವರಣದಿಂದಾಗಿ ದೆಹಲಿಯ ‘ಅಲ್ಪಸಂಖ್ಯಾತರು’ ಎ ಎ ಪಿಗೆ ಹತ್ತಿರವಾಗುವ ಸಾಧ್ಯತೆ ಇದೆ. ಏಕೆಂದರೆ ಕಾಂಗ್ರೆಸ್ ತನ್ನ ದುರ್ಬಲ ಉಪಸ್ಥಿತಿಯಿಂದಾಗಿ ಗಮನಾರ್ಹ ರೀತಿಯಲ್ಲಿ ಗೈರಾಗಿದೆ.
ಹಲವು ನೆಲೆಗಳಲ್ಲಿ ಜನಾದೇಶದ ಮಹತ್ವ
ಫೆಬ್ರವರಿ 11 ರಂದು ಹೊರಬರಲಿರುವ ತೀರ್ಪು ಒಂದಕ್ಕಿಂತ ಹೆಚ್ಚು ನೆಲೆಯಲ್ಲಿ ರಾಷ್ಟ್ರೀಯ ಮಹತ್ವ ಹೊಂದಿದೆ, ಎಲ್ಲಕ್ಕಿಂತ ಮೊಟ್ಟ ಮೊದಲನೆಯದಾಗಿ ಇದು ಭಾರತದ ವಿವಿಧ ಪಕ್ಷಗಳ ರಾಜಕೀಯ ಭಾಷೆಯ ಮೇಲೆ ಪರಿಣಾಮ ಬೀರುತ್ತದೆ. ತಮ್ಮ ಆದ್ಯತೆ ಅಭಿವೃದ್ಧಿಗೊ, ಅಸ್ಮಿತೆಯೆಡೆಗೊ ಅಥವಾ ಬೇರೆ ಸಂಗತಿಯ ಕಡೆಗೊ ಎಂಬುದರ ಕುರಿತಾದ ನಾಗರಿಕರ ಮತದಾನದ ಆಯ್ಕೆಯನ್ನು ಜನಾದೇಶ ಒರೆಗೆ ಹಚ್ಚಲಿದೆ. ಅಲ್ಲದೆ ಅಭಿವೃದ್ಧಿ ಮತ್ತು ಅಸ್ಮಿತೆ ಎಂಬುವು ಆತ್ಯಂತಿಕವಾಗಿ ಸಾಂದರ್ಭಿಕವಾಗಿದ್ದು ಮತದಾರರಿಗೆ ವಿವಿಧ ಸಮಯ ಮತ್ತು ಬೇರೆ ಬೇರೆ ಸಂದರ್ಭಗಳಲ್ಲಿ ಭಿನ್ನ ರೀತಿಯಲ್ಲಿ ಕಂಡುಬರಲಿವೆಯೇ ಎಂಬುದನ್ನು ಕೂಡ ಗುರುತಿಸಲಿದೆ. ‘ಮೋದಿ ಪಿಎಂ ಸ್ಥಾನಕ್ಕೆ; ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ’ ಎಂಬುದು ಇತ್ತೀಚಿನವರೆಗೂ ದೆಹಲಿ ಮತದಾರರಿಗೆ ಸಾಕಷ್ಟು ಅರ್ಥಗಳನ್ನು ಹೊರಹೊಮ್ಮಿಸುತ್ತಿದ್ದ ಘೋಷಣೆ ಆಗಿತ್ತು. ಇದೇ ವೇಳೆ ಭಾರತೀಯ ಒಕ್ಕೂಟ ವ್ಯವಸ್ಥೆ ಮೇಲೆ ಕೂಡ ಚುನಾವಣೆ ಗಮನಾರ್ಹ ಪ್ರಭಾವ ಬೀರಲಿದೆ. ಬಿಜೆಪಿಯ ರೂಪದಲ್ಲಿ ‘ಒಂದೇ ಪಕ್ಷ ಪ್ರಾಬಲ್ಯ ಮೆರೆಯುವ’ ಯುಗದಲ್ಲಿ ( ಸ್ವಾತಂತ್ರ್ಯ ನಂತರದ ಆರಂಭಿಕ ದಶಕಗಳಲ್ಲಿ ಕಾಂಗ್ರೆಸ್ಸಿಗೆ ಇಂತಹ ಅವಕಾಶ ಲಭಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು ) ಬಿಜೆಪಿಯೇತರ ಪಕ್ಷಗಳ ಉದಯ ಆಸಕ್ತಿಕರವಾಗಿ ಕಂಡು ಬರಲಿದೆ.
ವಿಶೇಷವಾಗಿ ಪ್ರಬಲ ‘ಕಾರ್ಯಕಾರಿ ವ್ಯಕ್ತಿಗಳ’ ( ಮೋದಿ ವರ್ಸಸ್ ಕೇಜ್ರಿವಾಲ್, ಷಾ ವರ್ಸಸ್ ಕೇಜ್ರಿವಾಲ್ ) ವಿರುದ್ಧ ಸ್ಪರ್ಧಿಸಿ ತಮ್ಮ ಪ್ರಾಬಲ್ಯ ಮತ್ತು ವ್ಯಾಪ್ತಿ ಮುಖೇನ ಜನಪ್ರಿಯ ಮುಖ್ಯಮಂತ್ರಿಗಳು ನಿರಂತರ ಗೆಲುವು ಸಾಧಿಸಿದರೆ ಅತಿ ಕೇಂದ್ರಿತ ಶಕ್ತಿಯೊಂದಕ್ಕೆ ಇದಿರಾಗಿ ಮತದಾರರು ಸ್ಥಳೀಯ ಮತ್ತು ಪ್ರಾದೇಶಿಕ ರಾಜಕಾರಣಕ್ಕೆ ಮನ್ನಣೆ ನೀಡಿದಂತೆ ಆಗುತ್ತದೆ. ಮತದಾನಕ್ಕೆ ದೆಹಲಿ ಸಜ್ಜಾಗುತ್ತಿರುವಂತೆ ಭಾರತದ ಚಿತ್ತ ಅದರತ್ತ ನೆಟ್ಟಿದೆ.
- ಡಾ. ಕೌಸ್ತುಭ್ ದೇಕ