ನವದೆಹಲಿ: ಕೋವಿಡ್ -19 ಲಸಿಕೆಗಾಗಿ ಮೊದಲ ಮತ್ತು ಎರಡನೇ ಹಂತದ ಮಾನವ ಕ್ಲಿನಿಕಲ್ ಪ್ರಯೋಗ ನಡೆಸಲು ಫಾರ್ಮಾ ದೈತ್ಯ ಝ್ಯಾಡಸ್ ಕ್ಯಾಡಿಲಾ ಕಂಪನಿಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ.
ಪ್ರಾಣಿಗಳ ಮೇಲೆ ನಡೆಸಿದ್ದ ಪ್ರಯೋಗದ ಆಧಾರದ ಡೇಟಾವನ್ನು ಕಂಪನಿಯು ಡಿಸಿಜಿಐಗೆ ಸಲ್ಲಿಸಿದೆ. ಇಲಿ, ಮೊಲ, ಗಿನಿಯಿಲಿಳಂತಹ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗಿತ್ತು. ಈ ಪ್ರಾಣಿಗಳು ವೈರಸ್ ವಿರುದ್ಧ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿದ್ದವು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಎಎನ್‌ಐಗೆ ತಿಳಿಸಿದರು.
ಕಂಪನಿಯು ಪ್ರಾಣಿಗಳ ಮೇಲೆ ನಡೆಸಿದ್ದ ಪ್ರಯೋಗ ದತ್ತಾಂಶವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಅವರ ಪ್ರಯೋಗ ತೃಪ್ತಿಕರವೆಂದು ಕಂಡುಬಂದಿದೆ. ಮೊದಲ ಹಂತದ ಪ್ರಯೋಗ ನಡೆಸಲು ಝ್ಯಾಡಸ್ ಕ್ಯಾಡಿಲಾಗೆ ಡಿಸಿಜಿಐ ಅನುಮತಿ ನೀಡಿದೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಸಂಭಾವ್ಯ ಕೋವಿಡ್-19 ಲಸಿಕೆಗೆ ಭಾರತವು ಎರಡು ಸ್ಥಳೀಯ ತಯಾರಕರನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ -19ಗೆ ಸ್ಥಳೀಯ ಲಸಿಕೆ ಅಭಿವೃದ್ಧಿಪಡಿಸಲು ಸ್ಟೇಜ್ I ಮತ್ತು ಸ್ಟೇಜ್ IIನಲ್ಲಿ ಮಾನವವರ ಮೇಲೆ ಕ್ಲಿನಿಕಲ್ ಪ್ರಯೋಗ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಭಾಗಿತ್ವ ಹೊಂದಿರುವ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ಗೆ (ಬಿಬಿಐಎಲ್) ಡಿಸಿಜಿಐ ಅನುಮತಿ ನೀಡಿದೆ.