ನವದೆಹಲಿ: ಭಾರತದಲ್ಲಿ ರಷ್ಯಾದ ಕೋವಿಡ್-19 ಲಸಿಕೆಯ (ಸ್ಪುಟ್ನಿಕ್ ವಿ) 2 ಹಾಗೂ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಿರ್ವಹಿಸಲು ಪರಿಷ್ಕೃತ ಪ್ರೋಟೋಕಾಲ್ ಸಲ್ಲಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತಜ್ಞರ ಸಮಿತಿಯು ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ಗೆ (ಡಿಆರ್ಎಲ್) ನಿರ್ದೇಶನ ನೀಡಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚೆಗೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಭಾರತದಲ್ಲಿ ರಷ್ಯಾದ ಕೋವಿಡ್-19 ಲಸಿಕೆಗಾಗಿ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅನುಮೋದನೆ ಕೋರಿ ಉನ್ನತ ಔಷಧ ನಿಯಂತ್ರಕರಿಗೆ ಅರ್ಜಿ ಸಲ್ಲಿಸಿತ್ತು.
"ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಸಲ್ಲಿಸಿದ ಅರ್ಜಿಯ ಕುರಿತು ಸಮಗ್ರ ಮೌಲ್ಯಮಾಪನ ನಡೆಸಿದೆ. ಎಸ್‌ಇಸಿ ಹೆಚ್ಚಿನ ಮಾಹಿತಿಯೊಂದಿಗೆ ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ನಿಂದ ಪರಿಷ್ಕೃತ ಪ್ರೋಟೋಕಾಲ್ ಸಲ್ಲಿಸುವಂತೆ ಕೋರಿದ್ದು, ಅವರು ಡಿಸಿಜಿಐಗೆ ಹೊಸ ಪ್ರೋಟೋಕಾಲ್ ಒದಗಿಸಬೇಕಾಗಿದೆ" ಎಂದು ಸರ್ಕಾರಿ ಅಧಿಕಾರಿ ಹೇಳಿದ್ದಾರೆ.
ಭಾರತೀಯ ಡ್ರಗ್ ಮೇಕರ್ ಡಾ. ರೆಡ್ಡಿಸ್ ಲ್ಯಾಬ್ ರಷ್ಯಾದ ನೇರ ಹೂಡಿಕೆ ನಿಧಿಯೊಂದಿಗೆ (ಆರ್‌ಡಿಐಎಫ್) ಕೈಜೋಡಿಸಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಪ್ರಯೋಗ ನಡೆಸಲು ಮತ್ತು ಅದರ ವಿತರಣೆಯ ಹಕ್ಕು ಪಡೆದಿದೆ.