ನವದೆಹಲಿ: ಭಾರತದಲ್ಲಿ ಈವರೆಗೆ ಒಟ್ಟು 396 ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ಕಟ್ಟೆಚ್ಚರ ವಹಿಸಿರುವ ಸೋಂಕು ಪೀಡಿತ ರಾಜ್ಯಗಳ ಸರ್ಕಾರಗಳು ಮಾ.31ರ ವರೆಗೆ ಲಾಕ್ಡೌನ್ ಘೋಷಿಸಿವೆ.
ಕರ್ನಾಟಕದಲ್ಲಿ ಹೊಸದಾಗಿ 7 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 27ಕ್ಕೇ ಏರಿಕೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ, ಬೆಂ. ಗ್ರಾಮಾಂತರ, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು, ಚಿಕ್ಕಬಳ್ಳಾಪುರ ಮತ್ತು ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಜಿಲ್ಲೆಗಳು ಸಂಪೂರ್ಣ ಬಂದ್ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಉತ್ತರ ಪ್ರದೇಶದಲ್ಲಿ 15 ನಗರಗಳನ್ನು ಲಾಕ್ಡೌನ್ ಮಾಡುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74ಕ್ಕೆ ಏರಿಕೆಯಾಗಿದ್ದು, ಮುಂಬೈ, ಪುಣೆ, ನಾಗ್ಪುರ ಸೇರಿ ಅನೇಕ ನಗರಗಳು ಬಂದ್ ಆಗಿವೆ.
ತೆಲಂಗಾಣ ರಾಜ್ಯಾದ್ಯಂತ ಮಾ.31ರ ವರೆಗೂ ಲಾಕ್ಡೌನ್ ಮಾಡುವುದಾಗಿ ಸಿಎಂ ಕೆ ಚಂದ್ರಶೇಖರ್ ರಾವ್ ಘೋಷಿಸಿದ್ದಾರೆ. ಕೋವಿಡ್-19 ವಿರುದ್ಧ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಲುವಾಗಿ 1897 ರ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಲಾಕ್ಡೌನ್ ನಿರ್ಧಾರ ಕೈಗೊಂಡಿದ್ದಾರೆ. ಬಂದ್ ವೇಳೆ ಅಗತ್ಯ ವಸ್ತುಗಳ ಪೂರೈಕೆಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ರಾಜ್ಯದಲ್ಲಿ ಬಿಳಿ ರೇಷನ್ ಕಾರ್ಡ್ ಹೊಂದಿರುವರಿಗೆ 12 ಕೆಜಿ ಅಕ್ಕಿ ಹಾಗೂ 1500 ರೂ. ನೀಡಲು ಕೆಸಿಆರ್ ಸರ್ಕಾರ ನಿರ್ಧರಿಸಿದೆ.
ಮಾ.31ರ ವರೆಗೆ ಹರಿಯಾಣದಲ್ಲಿ ಫರಿದಾಬಾದ್, ಗುರುಗ್ರಾಮ್, ರೋಹ್ಟಕ್, ಜಜ್ಜರ್, ಸೋನಿಪತ್, ಪಾಣಿಪತ್ ಮತ್ತು ಪಂಚಕುಲ ಈ ಏಳು ಜಿಲ್ಲೆಗಳು ಲಾಕ್ಡೌನ್ ಆಗಲಿವೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಣೆ ಮಾಡಿದ್ದಾರೆ.
ದೆಹಲಿಯಲ್ಲಿ ಇಂದು ರಾತ್ರಿ 9 ಗಂಟೆಯಿಂದ ಮಾ.31 ರ ಮಧ್ಯರಾತ್ರಿಯವರೆಗೂ ಸೆಕ್ಷನ್ 144 ಜಾರಿಯಾಗಿದೆ. ಅಲ್ಲದೇ ಸೋಮವಾರ ಬೆಳಗ್ಗೆ 6 ರಿಂದ ಮಾ.31ರ ಮಧ್ಯರಾತ್ರಿಯ ವರೆಗೆ ದೆಹಲಿಯ ಎಲ್ಲಾ ಪ್ರದೇಶಗಳು ಲಾಕ್ಡೌನ್. ಅಗತ್ಯ ಸೇವೆಗಳು ಮಾತ್ರ ಲಭ್ಯ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಹಾರ್ನಲ್ಲೂ ಮಾ.31 ರ ವರೆಗೆ ಲಾಕ್ಡೌನ್ ಹಾಗೂ ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿವೆ ಎಂದು ಬಿಹಾರ್ ಸಿಎಂ ಕಚೇರಿಯಿಂದ ಮಾಹಿತಿ ದೊರೆತಿದೆ. ಆಂಧ್ರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಮಾ.31ರ ವರಗೆ ಲಾಕ್ಡೌನ್ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.
ಇತರೆ ರಾಜ್ಯಗಳಿಂದ ಮೇಘಾಲಯಕ್ಕೆ ಪ್ರವೇಶ ನಿಷೇಧ ಹೆರಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ. ಮಾ.31ರ ವರೆಗೆ ದೇಶಾದ್ಯಂತ ಎಲ್ಲಾ ಮೆಟ್ರೋ ಸೇವೆಗಳು ಸ್ಥಗಿತಗೊಳಿಸಲು ಎಂದು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಗೋವಾದಲ್ಲಿ ಜನತಾ ಕರ್ಫ್ಯೂ ಇನ್ನೂ 3 ದಿನ ಮುಂದೂಡಿಕೆ ಮಾಡಿ ಸಿಎಂ ಪ್ರಮೋದ್ ಸಾವಂತ್ ಆದೇಶ ಹೊರಡಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಸೆಕ್ಷನ್ 144 ಜಾರಿ ಹಾಗೂ ಮಾ.21ರ ವರೆಗೆ ಲಾಕ್ಡೌನ್ ಮಾಡುವಂತೆ ಉಪ ಆಯುಕ್ತರಿಗೆ ಜಮ್ಮು-ಕಾಶ್ಮೀರ್ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ.
ಮಾರ್ಚ್ 31 ರವರೆಗೆ ಛತ್ತೀಸ್ಗಡ್ನಲ್ಲಿ ಸೆಕ್ಷನ್ 144 ಜಾರಿ. ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳು ಸ್ಥಗಿತ ಎಂದು ಛತ್ತೀಸ್ಗಡ್ ಸಿಎಂ ಭೂಪೇಶ್ ಬಾಗೆಲ್ ಹೇಳಿಕೆ ನೀಡಿದ್ದಾರೆ. ಜಾರ್ಖಂಡ್ನಲ್ಲಿ ಕೂಡ ಮಾ.31ರ ವರೆಗೆ ಲಾಕ್ಡೌನ್ ಹೇರಲಾಗಿದೆ.
ಕೇರಳದಲ್ಲಿ ಒಂದೇ ದಿನ 15 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ. ಕಾಸರಗೋಡು ಮತ್ತು ಕೋಯಿಕೋಡ್ ಜಿಲ್ಲೆಯಲ್ಲಿ ಸೆ.144 ಜಾರಿ ಮಾಡಲಾಗಿದೆ.
ಪಂಜಾಬ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದರೆ, ತಮಿಳುನಾಡಲ್ಲಿ 9ಕ್ಕೆ ಏರಿಕೆಯಾಗಿದೆ. ಇನ್ನು ರಾಜಸ್ಥಾನದಲ್ಲಿ ಇಂದು 3 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ.