ಹೈದರಾಬಾದ್: ಕೊರೊನಾವನ್ನು ವ್ಯವಸ್ಥಿತವಾಗಿ ಮಟ್ಟಹಾಕಲು ಹಾಗೂ ಎದುರಿಸಲು ಸಾಧ್ಯವಾಗದ ಕಾರಣ ಅಮೆರಿಕದಲ್ಲಿ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, 55 ಸಾವಿರಕ್ಕೂ ಹೆಚ್ಚು ಸಾವುಗಳ ಮೂಲಕ ಆ ದೇಶ ಭಾರಿ ಬೆಲೆ ತೆತ್ತಿದೆ.
ಆದರೆ, ಭಾರತ ಮಾತ್ರ ಈ ತಪ್ಪು ಮಾಡಲಿಲ್ಲ. ತನ್ನ ವಿವೇಕಯುವ ನಿರ್ಣಯದಿಂದಾಗಿ ಅದೆಷ್ಟೋ ಪ್ರಾಣ ಹಾನಿ ತಡೆದಿದೆ. ಸರ್ಕಾರವು ಲಾಕ್‌ಡೌನ್ ವಿಧಿಸಿ 130 ಕೋಟಿ ಜನರೂ ಕೂಡ ಮನೆಯಲ್ಲೇ ಇರಬೇಕು ಎಂದು ಮನವಿ ಮಾಡಿತು. ಪರಿಣಾಮ ಒಂದು ರೀತಿಯಲ್ಲಿ ಕೊರೊನಾ ವಿರುದ್ಧ ಹೋರಾಡಲು ಇದು ಮಹಾ ಅಸ್ತ್ರವಾಯಿತು. ಆದರೆ, ವಲಸೆ ಕಾರ್ಮಿಕರ ಜೀವನ ಅಧೋಗತಿಗೆ ತಳ್ಳಲ್ಪಟ್ಟಿದೆ. ಕೆಲಸಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ಹೋದ ಕಾರ್ಮಿಕರು ಉದ್ಯೋಗವೂ ಇಲ್ಲದೆ ಶೋಚನೀಯ ಸ್ಥಿತಿ ತಲುಪಿದ್ದಾರೆ.
ಲಾಕ್‌ಡೌನ್ ಘೋಷಣೆಯ ಆರಂಭಿಕ ದಿನಗಳಲ್ಲಿ, ಯುಪಿ, ಬಿಹಾರ ಮತ್ತು ರಾಜಸ್ಥಾನ ಸರ್ಕಾರಗಳು ವಲಸೆ ಕಾರ್ಮಿಕರನ್ನು ತಮ್ಮ ತವರಿಗೆ ಕರೆತರು ವ್ಯವಸ್ಥೆ ಮಾಡಿದರು. ಆದರೆ, ಹಲವು ರಾಜ್ಯಗಳು ಲಾಕ್‌ಡೌನ್ ಆದೇಶಕ್ಕೆ ಒಳಪಟ್ಟು ತಮ್ಮ ರಾಜ್ಯಗಳ ಕಾರ್ಮಿಕರನ್ನು ತವರಿಗೆ ಕರೆತರಲು ಸಾಧ್ಯವಾಗಲಿಲ್ಲ. ಈಗ ಲಾಕ್‌ಡೌನ್ ಮುಗಿದ ತಕ್ಷಣ ಕಾರ್ಮಿಕನ್ನು ತವರಿಗೆ ಕರೆತರಲು ರಾಜ್ಯಗಳು ಸಿದ್ಧತೆ ಮಾಡಿಕೊಂಡಿವೆ.
ನಾಂದೇಡ್‌ನಲ್ಲಿ ಸಿಲುಕಿರುವ 3,800 ಸಿಖ್ ಯಾತ್ರಾರ್ಥಿಗಳನ್ನು ತಮ್ಮ ತವರಿಗೆ ಕರೆದೊಯ್ಯಲು ಕೇಂದ್ರ ಗೃಹ ಸಚಿವಾಲಯ ಅನುಮತಿ ನೀಡಿದೆ. ಈ ಹಿನ್ನೆಲೆ ಯುಪಿ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಛತ್ತೀಸ್‌ಗಢದ 3.5 ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರ ತವರಿಗೆ ಕಳುಹಿಸಿಕೊಡಲು ಸಿದ್ಧ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಆದಾಗ್ಯೂ, ವೈರಸ್‌ನಿಂದ ಹೆಚ್ಚು ಸೋಂಕಿಗೆ ಒಳಗಾದ ರಾಜ್ಯಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರನ್ನು ವಾಪಸ್ ಕಳುಹಿಸುವುದು ಕೂಡ ದೊಡ್ಡ ಅಪಾಯವನ್ನು ಎದುರಿಸಿದಂತೆಯೇ ಸರಿ.
ವಲಸೆ ಕಾರ್ಮಿಕರ ಈ ಪರಿಸ್ಥಿತಿಯನ್ನು ರಾಷ್ಟ್ರೀಯ ಸಮಸ್ಯೆಯೆಂದು ಪರಿಗಣಿಸಿ ಸಮಗ್ರ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ. ಭಾರತದಲ್ಲಿ ನಾಲ್ಕು ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರಿದ್ದಾರೆ. ಇವರು, ಲಾಕ್‌ಡೌನ್‌ನ ಪರಿಣಾಮವನ್ನು ಎದುರಿಸುತ್ತಿದ್ದಾರೆ ಎಂದು ನಾಲ್ಕು ದಿನಗಳ ಹಿಂದೆ ವಿಶ್ವ ಬ್ಯಾಂಕ್ ವರದಿ ಮಾಡಿದೆ.
ಇನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಲಸೆ ಕಾರ್ಮಿಕರಿಗೆ ಎಷ್ಟೇ ಸಹಾಯ ಮಾಡಲು ಯತ್ನಿಸಿದರೂ ಕೊರೊನಾಗಿಂತ ಹೆಚ್ಚಾಗಿ ಇವರು ಹಸಿವಿನಿಂದಲೇ ಬಳಲುತ್ತಿರುವುದು ಇತ್ತೀಚೆಗೆ ಎಲ್ಲಾ ಕಡೆ ವರದಿಯಾಗುತ್ತಿದೆ. ಇದು ಪ್ರಸ್ತುತ ದಿನಗಳ ಕಠಿಣ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ.
ಅಸಂಘಟಿತ ವಲಯದ ಕಾರ್ಮಿಕರ ಎಲ್ಲಾ ವಿವರಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದು, ನಗದು ವರ್ಗಾವಣೆಯ ಜೊತೆಗೆ ಇತರ ಪ್ರಯೋಜನಗಳನ್ನು ನೀಡಲು ಮುಂದಾಗಿದೆ. ಅಲ್ಲದೆ, ಹತ್ತಿರದ ಕೈಗಾರಿಕೆಗಳಲ್ಲಿನ ಶಿಬಿರಗಳಲ್ಲಿ ನೆಲೆಸಿರುವ 22 ಮಿಲಿಯನ್ ವಲಸೆ ಕಾರ್ಮಿಕರಿಗೆ ಅವರ ಕೌಶಲ್ಯಗಳಿಗೆ ತಕ್ಕಂತೆ ಸೂಕ್ತ ಉದ್ಯೋಗವನ್ನು ಖಾತ್ರಿಪಡಿಸಿಕೊಳ್ಳಲು ಕೇಂದ್ರವು ತಿಳಿಸಿದೆ. ಆದರೆ, ಕಾರ್ಮಿಕರ ಕೌಶಲ್ಯದ ಬಗ್ಗೆ ಮಾಹಿತಿ ಲಭ್ಯವಾಗದ ಕಾರಣ ಸರ್ಕಾರ ಕೂಡ ಏನನ್ನೂ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಇತ್ತೀಚೆಗಷ್ಟೇ ವಲಸೆ ಕಾರ್ಮಿಕರು ಮರಳಿ ತವರಿಗೆ ಬರಲು ತಮ್ಮ ವಿವರಗಳನ್ನು ವೆಬ್ ಪೋರ್ಟಲ್ ಮುಖಾಂತರ ನೋಂದಾಯಿಸಿಕೊಳ್ಳಬೇಕು. ನಂತರ ಸರ್ಕಾರ ಕಾರ್ಮಿಕರನ್ನು ಕರೆತರಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುತ್ತದೆ ಎಂದು ಒಡಿಶಾ ಸರ್ಕಾರ ಘೋಷಣೆ ಮಾಡಿದೆ. ಅಲ್ಲದೆ, ಮುಂದಿನ ಕೆಲವು ವಾರಗಳಲ್ಲಿ 15 ಮಿಲಿಯನ್ ವಲಸೆ ಕಾರ್ಮಿರ ಉದ್ಯೋಗದತ್ತ ಗಮನ ಹರಿಸುವುದಾಗಿ ಯುಪಿ ನಿರ್ಧರಿಸಿದೆ.