ಹಿಮ್ಮತ್ನಗರ್: ಸುಮಾರು 8 ತಿಂಗಳ ಹಿಂದೆ ನೇಣಿಗೆ ಶರಣಾಗಿದ್ದಾನೆ ಎನ್ನಲಾದ ವ್ಯಕ್ತಿಯ ಹೆಣವನ್ನು ನ್ಯಾಯಕ್ಕಾಗಿ ಆಗ್ರಹಿಸಿ ಅಂತ್ಯಸಂಸ್ಕಾರ ಮಾಡದೇ ಮರದಲ್ಲೇ ನೇತು ಹಾಕಿರುವ ಘಟನೆ ಹಿಮಾಚಲ ಪ್ರದೇಶದ ತಧಿವಿಧಿ ಗ್ರಾಮದಲ್ಲಿ ನಡೆದಿದೆ.
ಕಳೆದ 8 ತಿಂಗಳ ಹಿಂದೆ ತಧಿವಿಧಿ ಗ್ರಾಮದ ಮರವೊಂದರಲ್ಲಿ ನೇಣು ಹಾಕಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆಯಾಗಿತ್ತು. ಪೋಲಿಸರು ಆತ್ಮಹತ್ಯೆ ಎಂದು ತಿಳಿಸಿದ್ದರು. ಆದರೆ ಮೃತ ವ್ಯಕ್ತಿಯ ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಹಾಗಾಗಿ ಈ ಸಾವಿಗೆ ನ್ಯಾಯ ಸಿಗುವವರೆಗೂ ಹೆಣವನ್ನು ಸ್ವೀಕರಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಪ್ರಕರಣದ ಹಿನ್ನೆಲೆ:
ಮೃತ ಯುವಕ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆ ಯುವತಿ ಕುಟುಂಬದವರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಸಾವಿಗೆ ನ್ಯಾಯ ಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೇ ಈ ಪ್ರದೇಶದ ಜನರ ಒಂದು ಸಂಪ್ರದಾಯದಂತೆ ವ್ಯಕ್ತಿಯೋರ್ವ ಅಸ್ವಾಭಾವಿಕವಾಗಿ ಮೃತಪಟ್ಟರೆ ಆರೋಪಿಗಳು ಸಾವಿಗೆ ಬೆಲೆ ತೆರಬೇಕು ಹಾಗೂ ಮೃತನ ಕುಟುಂಬಕ್ಕೆ ಇಂತಿಷ್ಟು ಹಣ ನೀಡಬೇಕೆಂಬ ಪದ್ಧತಿ ಇದ್ದು, ಮೃತ ವ್ಯಕ್ತಿಯ ಸಂಬಂಧಿಕರಿಗೆ ಈಗಾಗಲೇ ಆರೋಪಿಗಳು ಹಣ ನೀಡಿದ್ದಾರೆ ಎಂದು ಹೇಳಲಾಗಿದೆ.