ವಾಷಿಂಗ್ಟನ್ (ಅಮೆರಿಕ) :ವಿಶ್ವದಲ್ಲೇ ಅತಿ ಹೆಚ್ಚು ಸೋಂಕಿತರಿರುವ ರಾಷ್ಟ್ರ ಅಮೆರಿಕ. ಇಲ್ಲಿ 1,89,633 ಮಂದಿ ಕೊರೊನಾ ಸೋಂಕಿತರಿದ್ದು, ಒಂದೇ ದಿನ 865 ಮಂದಿ ಮೃತಪಟ್ಟಿದ್ದು, ಒಟ್ಟಾರೆ ಇದುವರೆಗೂ 3,873 ಮಂದಿ ಸಾವನ್ನಪ್ಪಿದ್ದಾರೆ.
ಅಲ್ಲಿನ ಸಾರ್ವಜನಿಕರ ಆರೋಗ್ಯಕ್ಕೆ ಕೊರೊನಾ ಮಾರಕವಾಗಿ ಕಾಡುತ್ತಿದ್ದು ಮನೆಗಳಲ್ಲಿಯೇ ಇರಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಚಿಕಿತ್ಸೆ ತೆಗೆದುಕೊಂಡು ಗುಣಮುಖರಾಗುತ್ತಿರುವವರ ಸಂಖ್ಯೆಯೂ ಕೂಡಾ ಹೆಚ್ಚಿದ್ದು ಈವರೆಗೂ 7,136 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆಲವೊಂದು ಅಲ್ಲಿನ ಸಾರ್ವಜನಿಕರಿಗೆ ಮಾರ್ಗದರ್ಶನ ನೀಡಿದ್ದು, 30 ದಿನಗಳಲ್ಲಿ ಕೊರೊನಾ ಹರಡದಂತೆ ತಡೆಯುವುದು ಹೇಗೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಅಮೆರಿಕ ನಂತರ ಕೊರೊನಾ ಹಾವಳಿಯಿಂದ ತತ್ತರಿಸಿರುವ ರಾಷ್ಟ್ರಗಳೆಂದರೆ ಇಟಲಿ ಹಾಗೂ ಸ್ಪೇನ್. 1105,792 ಮಂದಿ ಸೋಂಕಿತರಿರುವ ಇಟಲಿಯಲ್ಲಿ ಈವರೆಗೂ ಸೋಂಕಿನಿಂದ ಸಾವನ್ನಪ್ಪಿದವರು 12,428. ವಿಶ್ವದಲ್ಲೇ ಅತಿ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿರೋ ಇಟಲಿಯಲ್ಲಿ 15,729 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಟಲಿಯ ನಂತರ ಸ್ಪೇನ್ನಲ್ಲಿ ಕೊರೊನಾ ಹಾವಳಿ ತೀವ್ರವಾಗಿದ್ದು 95,923 ಮಂದಿ ಸೋಂಕಿತರಿದ್ದಾರೆ. 8,464 ಮಂದಿ ಈವರೆಗೂ ಸಾವನ್ನಪ್ಪಿದ್ದು, 19 ಸಾವಿರ ಮಂದಿಗೆ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ. ಈ ರಾಷ್ಟ್ರಗಳಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದೆಡೆ ಸೋಂಕಿತರ ಸಂಖ್ಯೆ ಏರುತ್ತಿದ್ದು, ಮತ್ತೊಂದೆಡೆ ಗುಣಮುಖರಾಗುವವರ ಏರಿಕೆಯಾಗುತ್ತಿದೆ.
ಕೊರೊನಾ ಕೇಂದ್ರಬಿಂದುವಾಗಿದ್ದ ಚೀನಾದಲ್ಲಿ 82 ಸಾವಿರ ಮಂದಿ ಸೋಂಕಿತರಿದ್ದು, ಗಣನೀಯವಾಗಿ ಚೇತರಿಕೆ ಕಾಣುತ್ತಿದೆ. ಕೇವಲ 3,193 ಮಂದಿ ಮಾತ್ರ ಇಲ್ಲಿ ಕೊರೊನಾಗೆ ಬಲಿಯಾಗಿದ್ದು, 76, 302 ಮಂದಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ. ಜರ್ಮನಿಯಲ್ಲಿ 71,808 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 775 ಮಂದಿ ಸಾವನ್ನಪ್ಪಿದ್ದಾರೆ. 16,100 ಮಂದಿಯನ್ನು ಕೊರೊನಾದಿಂದ ಗುಣಮುಖರನ್ನಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. ಅತಿ ಹೆಚ್ಚು ಸೋಂಕು ಹರಡಿದ ರಾಷ್ಟ್ರಗಳಲ್ಲಿ ಜರ್ಮನಿಯ ನಂತರ ಫ್ರಾನ್ಸ್, ಇರಾನ್, ಇಂಗ್ಲೆಂಡ್, ಸ್ವಿಟ್ಜರ್ಲ್ಯಾಂಡ್ ರಾಷ್ಟ್ರಗಳಿವೆ. ಈ ರಾಷ್ಟ್ರಗಳಲ್ಲಿ ಇರಾನ್ನಲ್ಲಿ ಅತಿ ಮಂದಿ ಮೃತಪಟ್ಟಿದ್ದಾರೆ.