ನವದೆಹಲಿ: 500ಕ್ಕೆ ಹೆಚ್ಚು ಖಚಿತ ಪ್ರಕರಣಗಳು ಹಾಗೂ ಸಾವುಗಳ ಸಂಖ್ಯೆ 11ನ್ನು ತಲುಪಿದ ನಂತರ, ಕೋವಿಡ್19 ವೈರಸ್ ಭೀತಿ ಭಾರತದ ಪಾಲಿಗೆ ನಿಜವಾದಂತಾಗಿದೆ. ನಮ್ಮಗಳ ಬದುಕು ಮತ್ತು ಆರ್ಥಿಕತೆಯ ಮೇಲೆ ಈ ವೈರಸ್‌ನ ಸಂಪೂರ್ಣ ಪರಿಣಾಮ ಏನಾಗಲಿದೆ ಎಂಬುದರ ಅಂದಾಜು ಮಾಡುವುದು ಸಹ ನಮಗೆ ಸಾಧ್ಯವಾಗುತ್ತಿಲ್ಲ. ಆದರೆ, ಅದು ನಮ್ಮ ಆರ್ಥಿಕತೆಯನ್ನು ಬುಡಮೇಲಾಗಿಸುವ ಮೂಲಕ ಬದುಕನ್ನು ಊಹೆಗೂ ನಿಲುಕದ ರೀತಿ ಅತಂತ್ರವಾಗಿಸಲಿದೆ ಎಂದು ಮಾತ್ರ ಖಚಿತವಾಗಿ ಹೇಳಬಹುದು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾರ್ಚ್ 19ರಂದು ಈ ಕುರಿತು ವಿವರಿಸುವ ತನಕ ಕೋವಿಡ್-19 ಸಾಂಕ್ರಾಮಿಕ ರೋಗ ನಿಜವಾದ ಸವಾಲನ್ನು ಒಡ್ಡಲಿದೆ ಎಂಬುದು ಪ್ರತಿಯೊಬ್ಬ ನಾಗರಿಕನ ಸಹಿತ ಇಡೀ ದೇಶಕ್ಕೆ ಗೊತ್ತೇ ಇರಲಿಲ್ಲ. ಮಾರ್ಚ್ 22ರ ಯಶಸ್ವಿ “ಜನತಾ ಕರ್ಫ್ಯೂ” ನಂತರ, ಸ್ವಯಂ ನಿರ್ಬಂಧವನ್ನು ವಿಧಿಸಿಕೊಳ್ಳುವಂತೆ ರಾಜ್ಯ ಸರ್ಕಾರಗಳಿಗೂ ಮೋದಿ ಅವರು ಕೇಳಿಕೊಳ್ಳುವ ಪರಿಸ್ಥಿತಿ ಈಗ ಬಂದಿದೆ.
ರಾಷ್ಟ್ರವ್ಯಾಪಿ ದಿಗ್ಬಂಧನ:ಸ್ವಾತಂತ್ರ್ಯಾ ನಂತರ, ಭಾರತ ಇದೇ ಮೊದಲ ಬಾರಿ ತನ್ನ ಅತ್ಯಂತ ಭೀಕರ ಯುದ್ಧವನ್ನು ಎದುರಿಸುವುದನ್ನು ಬರಲಿರುವ ದಿನಗಳಲ್ಲಿ ನಾವೆಲ್ಲ ಕಾಣಲಿದ್ದೇವೆ. ಈ ಮಾರಕ ರೋಗ ಪ್ರಸಾರವಾಗುವುದನ್ನು ನಿರ್ಬಂಧಿಸುವ ದೃಷ್ಟಿಯಿಂದ ಸಂಪೂರ್ಣ ದಿಗ್ಬಂಧನವನ್ನು ಕಡ್ಡಾಯವಾಗಿ ಜಾರಿಗೊಳಿಸುವ ಕೆಲಸದಲ್ಲಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಸ್ಥಳೀಯ ಸಂಸ್ಥೆಗಳು ಈಗ ತೊಡಗಿಕೊಂಡಿವೆ. ಆರ್ಥಿಕತೆ ಮತ್ತು ರೋಗ ಹರಡದಂತೆ ನಿರ್ಬಂಧಿಸುವುದು ಪರಸ್ಪರ ಜೋಡಣೆಯಾಗಿರುವಂಥವು. ಯಾರೂ ಮನೆಯಿಂದ ಹೊರಗೆ ಬಾರದೇ ಇದ್ದಾಗ, ಯಾವುದೇ ವಹಿವಾಟು ನಡೆಯದು. ಆಗ ಪ್ರತಿಯೊಂದು ಚಟುವಟಿಕೆಯೂ ಸ್ಥಗಿತವಾಗುತ್ತದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ರೋಗ ಹರಡುವ ಸಾಧ್ಯತೆಗಳು ಸಹ ಕಡಿಮೆಯಾಗುತ್ತ ಹೋಗುತ್ತವೆ.
ಆದರೆ, ಇದು ಆರ್ಥಿಕತೆಗೆ ಬಲವಾದ ಏಟು ಕೊಡುವ ವಿಧಾನವೂ ಹೌದು. ಆರೋಗ್ಯ ಕ್ರಮಗಳು ಕಡಿಮೆ ಕಠಿಣವಾದಷ್ಟೂ, ಅದರ ಆರ್ಥಿಕ ಪರಿಣಾಮಗಳು ಅಲ್ಪಾವಧಿ ಮಟ್ಟಿಗಾದರೂ ಸ್ವಲ್ಪ ಕಡಿಮೆಯಾಗುತ್ತವೆ. ಅದಾಗ್ಯೂ, ಆರ್ಥಿಕ ಲಾಭಗಳಿಗಿಂತ ಮನುಷ್ಯರ ಜೀವಗಳು ಹೆಚ್ಚು ಬೆಲೆಯುಳ್ಳವು. ಜನರ ಜೀವ ಮತ್ತು ಅವರ ಜೀವನೋಪಾಯವನ್ನು ಸರಿದೂಗಿಸುವ ಪ್ರಯತ್ನಗಳನ್ನು ಸರಕಾರ ಇದುವರೆಗಂತೂ ಮಾಡುತ್ತ ಬಂದಿದೆ. ಸಂಕಷ್ಟ ಮತ್ತು ಭೀತಿಯ ಸಂದರ್ಭಗಳಲ್ಲಿ ಪರಿಹಾರ ಮಾರ್ಗಕ್ಕಾಗಿ ಜನರು ಸದಾ ಸರಕಾರದ ಕಡೆಗೇ ನೋಡುತ್ತಾರೆ.
ಒಂದು ವೇಳೆ, ಈ ರೋಗವನ್ನು ಮೇ ಮಧ್ಯ ಭಾಗದಲ್ಲಿ ಹತೋಟಿಗೆ ತಂದರೆ, ಪರಿಸ್ಥಿತಿಯನ್ನು ಹೇಗಾದರೂ ನಿಭಾಯಿಸುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು ಮತ್ತು ವಾಣಿಜ್ಯ ನಾಯಕರು. ಒಂದು ವೇಳೆ, ಅದಕ್ಕಿಂತ ದೀರ್ಘ ಸಮಯ ಹಿಡಿದರೆ, ಆರ್ಥಿಕ ಚಟುವಟಿಕೆಗಳ ಮೇಲಿನ ಅದರ ಅದರ ಕರಿನೆರಳು ಮುಂದಿನ ಹಣಕಾಸು ವರ್ಷಕ್ಕೂ ವಿಸ್ತರಿಸಲಿದೆ. ಋಣಾತ್ಮಕ ಪರಿಣಾಮ ತಡೆಗಟ್ಟಲು ಹಾಗೂ ಯಾವ ವಲಯವು ಗಂಭೀರ ಸಂಕಷ್ಟಕ್ಕೆ ಸಿಲುಕುವುದೋ ಅಂತಹ ಪ್ರತಿಯೊಂದಕ್ಕೂ ಪರಿಹಾರ ಪ್ಯಾಕೇಜ್ ಪ್ರಕಟಿಸುವುದಕ್ಕೆ ಸಂಬಂಧಿಸಿದಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ಕಾರ್ಯಪಡೆಯೊಂದನ್ನು ರಚಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದ್ದಾರೆ.
ದಿನಗಳೆದಂತೆ ಸರಕು ದಾಸ್ತಾನಿನಲ್ಲಿ ತೀವ್ರ ಇಳಿಕೆಯಾಗುತ್ತಿದ್ದು, ಸರಕು ಕ್ಷೇತ್ರ ಭಾರೀ ಹೊಡೆತ ಎದುರಿಸುತ್ತಿರುವುದನ್ನು ಭಾರತೀಯ ಮಾರುಕಟ್ಟೆಗಳು ಈಗಾಗಲೇ ಅನುಭವಿಸುತ್ತಿವೆ. ಒಂದೇ ಒಂದು ದಿನದ ಮಟ್ಟಿಗೆ ಮಾರುಕಟ್ಟೆ ಬಂದಾದರೂ, ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ ಜಿಡಿಪಿಯ (ಒಟ್ಟು ರಾಷ್ಟ್ರೀಯ ಉತ್ಪನ್ನ) ರೂ. 50,000 ಕೋಟಿ ಮೊತ್ತದ ಉತ್ಪಾದನೆ ಶೂನ್ಯವಾಗುತ್ತದೆ ಎನ್ನುತ್ತಾರೆ ಹಣಕಾಸು ತಜ್ಞರು. ಹತ್ತು ದಿನಗಳ ನಿಷ್ಕ್ರಿಯತೆ ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ರೂ. 5 ಲಕ್ಷ ಕೋಟಿ ಅಥವಾ ಶೇಕಡಾ 3.4ರಷ್ಟು ಕುಸಿತವುಂಟು ಮಾಡುತ್ತದೆ.
ವಲಯವಾರು ಪರಿಣಾಮ: ಇತ್ತ ಸರ್ಕಾರ ಪರಿಹಾರ ಕಾರ್ಯಾಚರಣೆಗಳಿಗಾಗಿ ಬೃಹತ್ ಮಟ್ಟದ ನೀಲನಕ್ಷೆಯನ್ನು ಸಿದ್ಧಗೊಳಿಸುವ ಪ್ರಕ್ರಿಯೆಯಲ್ಲಿ ನಿರತವಾಗಿದ್ದಂತೆ, ಪ್ರತಿಯೊಂದು ಬೃಹತ್ ಉದ್ಯಮವೂ ತನ್ನದೇ ಆದ ವಿಷಯಗಳು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದೆ. ದಿಗ್ಬಂಧನ ಅಂತ್ಯವಾದ ನಂತರವಷ್ಟೇ, ವಿವಿಧ ವಲಯಗಳ ಉದ್ದಗಲಕ್ಕೂ ಅದು ಬೀರಿರುವ ಪರಿಣಾಮವನ್ನು ಲೆಕ್ಕ ಹಾಕಲು ಸಾಧ್ಯವಾದೀತು. ಕೃಷಿ ಕ್ಷೇತ್ರ ಇಂದು ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿದೆ. ಏಕೆಂದರೆ, ಇದು ಹಿಂಗಾರು ಬಿತ್ತನೆಯ ಪ್ರಾರಂಭದ ಕಾಲ. ಆದರೆ, ದಿಗ್ಬಂಧನ ಜಾರಿಯಲ್ಲಿರುವುದರಿಂದ ಪೂರೈಕೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿದ್ದು, ಅದು ರೈತರ ಆದಾಯದ ಮೇಲೆ ಪರಿಣಾಮ ಬೀರಲಿದೆ.
ಇನ್ನು, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಕೊರತೆ ಉಂಟಾಗಿರುವುದರಿಂದ ಪೂರೈಕೆ ಸರಣಿಯ ಸಮಸ್ಯೆಗಳನ್ನು ಎದುರಿಸಲು ಉತ್ಪಾದನಾ ವಲಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಒಂದು ವೇಳೆ ಸರಕಾರ ಮೂಲಸೌಕರ್ಯ ಅಭಿವೃದ್ಧಿ ಚಟುವಟಿಕೆಗಳಿಗೆ ಮೀಸಲಾಗಿಟ್ಟಿದ್ದ ಬಜೆಟ್ ಹಣವನ್ನು ಪರಿಹಾರ ಕಾರ್ಯಗಳಿಗೆ ತಿರುಗಿಸಿದ್ದೇ ಆದಲ್ಲಿ ಉಕ್ಕು ಮತ್ತು ಸಿಮೆಂಟ್‌ನಂತಹ ಕೈಗಾರಿಕೆಗಳು ಬಾಧಿತವಾಗಲಿವೆ. ಹೂಡಿಕೆ ಚಟುವಟಿಕೆಗಳು ಮಂದಗತಿಯಲ್ಲಿದ್ದಾಗ ಭಾರತೀಯ ಆರ್ಥಿಕತೆಗೆ ಚಾಲನಾ ಶಕ್ತಿ ನೀಡುವಂಥವು ಎಂದೇ ಸೇವಾ ವಲಯಗಳನ್ನು ಗುರುತಿಸಲಾಗಿದೆ. ಆದರೆ, ವಾಯುಯಾನ, ಹೋಟೆಲ್‌ಗಳು, ರೆಸ್ಟುರಾಂಟ್‌ಗಳು, ಪ್ರವಾಸೋದ್ಯಮ, ನಗದು ಮಾಲ್‌ಗಳು ಮತ್ತು ಮನರಂಜನೆಯಂತಹ ಈ ವಲಯಗಳು ವೈರಸ್ ದಾಳಿಯಿಂದಾಗಿ ಇವತ್ತು ದೊಡ್ಡ ಮಟ್ಟದ ಹೊಡೆತವನ್ನು ತಿನ್ನುತ್ತಿವೆ.
ನಿಶ್ಚಿತ ಆದಾಯ ಬೆಂಬಲದ ಅವಶ್ಯಕತೆ: ಔಪಚಾರಿಕ ಆರ್ಥಿಕತೆಯ ಸೂಕ್ಷ್ಮ ವಲಯಗಳ ಕುರಿತು ಏನು ಮಾಡುವುದು? ಸರಕಾರ ತನ್ನೆಲ್ಲ ವಿತ್ತೀಯ ಶಿಸ್ತಿನ ತತ್ವಗಳು ಹಾಗೂ ವಿತ್ತೀಯ ಕೊರತೆ ಅನುಪಾತವನ್ನು ಕೈಬಿಟ್ಟು ಜನರ ಜೀವನೋಪಾಯ ರಕ್ಷಣೆಗಾಗಿ ನೇರವಾಗಿ ಹಣಕಾಸು ಸೌಲಭ್ಯಗಳನ್ನು ಕೊಡಬೇಕೆ? ನಾಗರಿಕರು ಯಾವ ಪ್ರಮಾಣದ ತ್ಯಾಗಕ್ಕೆ ಅಣಿಯಾಗಬೇಕು? ಪ್ರಧಾನಮಂತ್ರಿಯೊಂದಿಗೆ ಇತ್ತೀಚೆಗೆ ನಡೆಸಿದ ವಿಡಿಯೋ ಕಾನ್ಫೆರೆನ್ಸಿಂಗ್‌ನಲ್ಲಿ ಮಾತನಾಡಿದ್ದ ಭಾರತೀಯ ಕೈಗಾರಿಕಾ ವಲಯದ ನಾಯಕರು, ಅಸಂಘಟಿತ ವಲಯಕ್ಕೆ ಸೇರಿದ ಕೋಟ್ಯಂತರ ಜನರಿಗೆ ಅಂದಾಜು ರೂ. 2 ರಿಂದ 3 ಲಕ್ಷ ಕೋಟಿ ನೇರ ನಗದು ವರ್ಗಾವಣೆ ಪ್ಯಾಕೇಜ್ ಘೋಷಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಕೋವಿಡ್-19 ಹರಡಿದ್ದರಿಂದ ಉಂಟಾದ ಸಂಕಷ್ಟದಿಂದಾಗಿ ಈ ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡಿದ್ದಾರೆ. ಒಂದೆಡೆ ಕೆಲಸಗಾರರನ್ನು ಮನೆಗೆ ಕಳಿಸುವುದಾಗಲಿ, ಅವರ ಸಂಬಳ ಕಡಿತಗೊಳಿಸುವುದನ್ನಾಗಲಿ ಮಾಡಬೇಡಿ ಎಂದು ಪ್ರಧಾನಮಂತ್ರಿಗಳು ಕೈಗಾರಿಕೆ ಮತ್ತು ವಾಣಿಜ್ಯ ವಲಯಕ್ಕೆ ಮನವಿ ಮಾಡಿಕೊಳ್ಳುತ್ತಿರುವ ಜೊತೆಗೇ, ಸಂಬಳ ಮತ್ತು ಪಿಂಚಣಿ ಪಾವತಿ ಹಾಗೂ ನಿರುದ್ಯೋಗ ನಿವಾರಣೆ ಯೋಜನೆಗಳಿಗೆ ಅನುದಾನ ನೀಡುವದರತ್ತ ಸರಕಾರ ತನ್ನ ಗಮನ ಹರಿಸಿದೆ.
ಅದೇ ಸಮಯದಲ್ಲಿ, ಆದಾಯ ಇಳಿಮುಖವಾಗಿರುವಾಗ ಸಂಬಳ ಪಾವತಿಸುವಂತೆ ಖಾಸಗಿ ವಲಯಕ್ಕೆ ಒತ್ತಾಯಿಸುವುದು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೇ ನೇರ ನಗದು ವರ್ಗಾವಣೆಯಂತಹ ಪರಿಹಾರ ಕಾರ್ಯಕ್ರಮಗಳನ್ನು ಸರಕಾರ ರಭಸದಿಂದ ನಡೆಸಲು ಕ್ರಮ ಕೈಗೊಳ್ಳಬೇಕಿದೆ. ಇದರ ಜೊತೆಗೆ, ಎಲ್ಲಾ ಸಾಲ ಪಾವತಿಗಳಿಗೆ ಸಂಬಂಧಿಸಿದಂತೆ ಮೂರು ತಿಂಗಳುಗಳ ಕಾಲ ಸ್ವನಿರ್ಬಂಧದ ಜೊತೆಗೆ, ವಾರ್ಷಿಕ ರೂ.೫ ಲಕ್ಷಕ್ಕಿಂತ ಕಡಿಮೆ ಆದಾಯ ಪಡೆಯುವವರ ಬ್ಯಾಂಕ್ ಖಾತೆಗಳಿಗೆ ಸರಕಾರ ನೇರ ನಗದು ವರ್ಗಾವಣೆ ಮಾಡುವಂತೆಯೂ ಕೈಗಾರಿಕೋದ್ಯಮಿಗಳು ಸರಕಾರವನ್ನು ಆಗ್ರಹಿಸಿದ್ದಾರೆ.
ದೇಶದ ಎಲ್ಲ ಜನರಿಗೂ ಅವರ ಖಾತೆಗಳಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ಪರಿಗಣಿಸುವಂತೆ ಅವರು ಪ್ರಧಾನಮಂತ್ರಿಗೆ ಮನವಿ ಮಾಡಿದ್ದಾರೆ. ಇಪ್ಪತ್ತೈದು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ರೂ.೫,೦೦೦ ಮೊತ್ತದ ಹಾಗೂ ೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.೧೦,೦೦೦ ಒಂದು ಸಲದ ಪಾವತಿ ಮಾಡುವಂತೆ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ – ಸಿಐಐ) ಪ್ರಧಾನಮಂತ್ರಿಯವರಿಗೆ ಶಿಫಾರಸು ಮಾಡಿದೆ. ಸಾರಾಂಶ ರೂಪದಲ್ಲಿ ಹೇಳುವುದಾದರೆ, ನಗದು ವರ್ಗಾವಣೆ, ಸಹಾಯಧನದಡಿ ಆಹಾರ, ಸಾಲ ಸೇವಾ ಅವಧಿಯ ವಿಸ್ತರಣೆ, ಉಚಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಔಷಧಿಗಳ ಆಮದು ಬೆಲೆಗಳನ್ನು ಇಳಿಸುವುದು ಮಾಡಬಹುದಾದಂತಹ ಕೆಲಸಗಳು.
ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿರುವ ಇಂತಹ ಪರಿಸ್ಥಿತಿಯಲ್ಲಿ, ಆದಾಯ ಸಂಗ್ರಹವು ಗಣನೀಯವಾಗಿ ಕುಸಿಯುವ ಸಂಭವವಿರುವಾಗ, ಭಾರತ ಇಂಥದೊಂದು ಕ್ರಮಕ್ಕೆ ಮುಂದಾದೀತೆ? ಅದೇನೇ ಆದರೂ ಸರ್ಕಾರ ಈ ಸಲಹೆಯನ್ನು ಎಚ್ಚರಿಕೆಯಿಂದ ಪರಿಗಣಿಸಬೇಕಿದೆ. ಇವು ನಿಜಕ್ಕೂ ಅಪರೂಪದ ಸಂದರ್ಭಗಳಾಗಿದ್ದು, ಅತಿ ವಿಶಿಷ್ಟ ಕ್ರಮಗಳನ್ನೇ ಬೇಡುವಂಥವು. ಇಂತಹ ಪರಿಸ್ಥಿತಿಯನ್ನು ನಿಭಾಯಿಸುವ ಕುರಿತು ಸರಕಾರಕ್ಕೆ ಮಾರ್ಗದರ್ಶನ ಕೊಡಬೇಕೆಂದರೆ ಅಂತಹ ಯಾವ ನಿದರ್ಶನಗಳೂ ಈ ಹಿಂದೆ ಆಗಿಲ್ಲ.
- ಶೇಖರ್ ಅಯ್ಯರ್