ವಿಲಕ್ಷಣ ಕೊರೊನಾ ವೈರಸ್ ಸಾರ್ವತ್ರಿಕ ಸಾಂಕ್ರಾಮಿಕ ರೋಗವಾಗಿ ಹರಡುತ್ತಿದೆ. ನಮ್ಮ ಜನಸಂಖ್ಯೆ, ದುರ್ಬಲ ಸಮುದಾಯಗಳು ಅಷ್ಟೇ ಅಲ್ಲದೆ, ಒಟ್ಟಾರೆ ಆರೋಗ್ಯ ಕ್ಷೇತ್ರದ ಮೇಲೆ ಉಂಟಾಗುವ ರೋಗದ ಪರಿಣಾಮ ತಡೆಯಲು ಆರೋಗ್ಯ ತಜ್ಞರು ಕೆಲಸ ಮಾಡುತ್ತಿದ್ದಾರೆ.
ಸಮುದಾಯವನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿ ಇರಿಸಿಕೊಳ್ಳಲು ಹೊರಟ ಸರ್ಕಾರ ಸಾಮಾಜಿಕ ಅಂತರ, ಸಂಪರ್ಕ ತಡೆ ಅಥವಾ ಪ್ರತ್ಯೇಕತೆಯ ಕ್ರಮಗಳೊಂದಿಗೆ ರೋಗ ಪ್ರಸಾರ ನಿಧಾನ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸಬೇಕೆಂದು ನಿರೀಕ್ಷೆ ಮಾಡುತ್ತಿದೆ. ತುರ್ತು ಪರಿಸ್ಥಿತಿಗೆ ಸ್ಪಂದಿಸುವುದರ ಮೇಲೆ ಹಾಗೂ ಸೋಂಕು ಎದುರಿಸಲು ಸಮುದಾಯಕ್ಕೆ ಸಹಾಯ ಮಾಡಲು ಹೋರಾಡುವ ಆರೋಗ್ಯ ಕಾರ್ಯಕರ್ತರ ಮೇಲೆ ಕೋವಿಡ್ - 19 ಸಾಂಕ್ರಾಮಿಕ ಗಮನಾರ್ಹ ಒತ್ತಡ ಹೇರುತ್ತಿದೆ. ಇದು ಜನರನ್ನು ಕೂಡ ವಿಪರೀತ ಯೋಚನೆಗೆ, ಭಾವನೆಗಳಿಗೆ ಹಾಗೂ ಪ್ರತಿಕ್ರಿಯೆಗೆ ತೊಡಗುವಂತೆ ಮಾಡಿದೆ.
ಸೀಮಿತ ಸಂಪನ್ಮೂಲ, ಉದ್ವಿಗ್ನತೆ ಮತ್ತು ವಿರಳ ಸಾಮಾಜಿಕ ಸಂಪರ್ಕದ ನಡುವೆ ಮನೆಯಲ್ಲಿಯೇ ವಾರಗಳನ್ನು ಕಳೆಯುವಂತೆ ಸರ್ಕಾರ ಹೊರಡಿಸಿರುವ ಆದೇಶ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸ್ವಯಂ- ಹೇರಿಕೆಯೇ ಆಗಿರಲಿ ಅಥವಾ ವೈದ್ಯಕೀಯವಾಗಿ ಕಡ್ಡಾಯವಾಗಿಯೇ ಇರಲಿ ಯಾವುದೇ ರೀತಿಯ ಸಾಮಾಜಿಕ ಪ್ರತ್ಯೇಕತೆ, ಒತ್ತಡದ ಪರಿಸ್ಥಿತಿ ತಂದೊಡ್ಡಿ ವಯಸ್ಕರು ಮತ್ತು ಮಕ್ಕಳಲ್ಲಿ ಆಘಾತಕಾರಿ ಅನುಭವ ಉಂಟು ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಕೋವಿಡ್ - 19 ಸಾಂಕ್ರಾಮಿಕ ರೋಗ ಹರಡುತ್ತಿದ್ದ ವೇಳೆ, ದೇಶದೆಲ್ಲೆಡೆ ಸರ್ಕಾರಗಳು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವಿವಿಧ ರೀತಿಯ ಆದೇಶಗಳನ್ನು ಹೊರಡಿಸಿವೆ. ಎಲ್ಲಾ ಶಾಲಾ ಸಂಸ್ಥೆಗಳು, ಮನರಂಜನಾ ಕ್ಷೇತ್ರಗಳು, ಸಮುದಾಯ ಸಂಘಟನೆಗಳು ತಾತ್ಕಾಲಿಕವಾಗಿ ಸ್ತಬ್ಧಗೊಂಡಿವೆ.
ಅಮೆರಿಕ ಫ್ರಾಂಟಿಯರ್ ಹೆಲ್ತ್ ಸಂಸ್ಥೆಯ ಮಕ್ಕಳ ಸೇವೆಗಳ ವಿಭಾಗದ ಹಿರಿಯ ಉಪಾಧ್ಯಕ್ಷ ಟಿಮ್ ಪೆರ್ರಿ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದಾರೆ : “ ನಿರ್ಬಂಧಕ್ಕೆ ಒಳಗಾಗಿರುವುದರಿಂದ ನೀವು ನಿಮ್ಮ ಸ್ವಾತಂತ್ರ್ಯ, ಕ್ಷಮತೆ ಕಳೆದುಕೊಂಡಿದ್ದು ಸಂಪರ್ಕರಹಿತತೆ ಅನುಭವಿಸುತ್ತಿದ್ದೀರಿ. ಇದು ಪರಿಸ್ಥಿತಿಯ ನಿಯಂತ್ರಣ ಕಳೆದುಕೊಂಡ ಭಾವಕ್ಕೆ , ಏಕಾಕಿತನಕ್ಕೆ ಹಾಗೂ ಉಳಿದ ಪ್ರಪಂಚದಿಂದ ಸಂಪರ್ಕ ಕಡಿತಗೊಂಡ ಸ್ಥಿತಿಗೆ ದೂಡುತ್ತದೆ. ಜನರ ಯೋಗಕ್ಷೇಮಕ್ಕಾಗಿಯೇ ಇದನ್ನೆಲ್ಲಾ ಮಾಡಿದ್ದರೂ ಕೂಡ ಅವರಲ್ಲಿ ನಿದ್ರಾಹೀನತೆ, ಕಳಪೆ ಏಕಾಗ್ರತೆ, ಆಘಾತದ ಅನುಭವ , ಖಿನ್ನತೆಗೆ ಕಾರಣ ಆಗುತ್ತಿದೆ. ಕೆಲವೊಮ್ಮೆ ಎಲ್ಲೋ ಸಿಲುಕಿ ಹಾಕಿಕೊಂಡಿರುವಂತೆ, ಸ್ನೇಹಿತರನ್ನು ಕಳೆದುಕೊಂಡಂತೆ, ಯಾವುದೋ ಹುಡುಕಾಟದಲ್ಲಿರುವಂತೆ, ತಮ್ಮನ್ನು ಯಾರೋ ಶಿಕ್ಷಿಸುತ್ತಿದ್ದಾರೆ ಎಂಬಂತೆ ಭಾವನೆಗಳನ್ನು ಹುಟ್ಟು ಹಾಕುತ್ತದೆ.”
ಸಾಮಾಜಿಕ ಅಂತರ, ಸಂಪರ್ಕ ತಡೆ ಅಥವಾ ಪ್ರತ್ಯೇಕತೆಯಿಂದಾಗಿ ಜನರಲ್ಲಿ ಒಂಟಿತನ ಹೆಚ್ಚಾಗಿದೆ. ಕೋವಿಡ್ - 19 ವಯೋವೃದ್ಧ ಜನ ಸಮೂಹದ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಸಹ ತಿಳಿದು ಬಂದಿದೆ. ಭಾರತದಲ್ಲಿ, ವಯಸ್ಸಾದ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಅವರ ಮಾನಸಿಕ ಸಮಸ್ಯೆಗಳು ದೊಡ್ಡದಾಗುತ್ತಿವೆ. ಒಂಟಿಯಾದ ಜನ ಹೆಚ್ಚು ಖಿನ್ನತೆಯ ಲಕ್ಷಣಗಳಿಂದ ಬಳಲುತ್ತಿದ್ದಾರೆ, ಏಕೆಂದರೆ ಅವರು ಕಡಿಮೆ ಸಂತೋಷ, ಕಡಿಮೆ ತೃಪ್ತಿ ಪಡೆಯುತ್ತಿದ್ದು ಹೆಚ್ಚು ನಿರಾಶಾವಾದಿಗಳಾಗುತ್ತಿದ್ದಾರೆ ಎಂದು ವರದಿಯಾಗಿದೆ. ಒಂಟಿತನ ಮತ್ತು ಖಿನ್ನತೆಯಿಂದ ಅಸಹಾಯಕತೆ ಮತ್ತು ದುಃಖದಂತಹ ಸಾಮಾನ್ಯ ಲಕ್ಷಣಗಳನ್ನು ಕಾಣಬಹುದು. ಸಿಂಗ್ ಮತ್ತು ಇತರರು ನಡೆಸಿದ ಒಂದು ಅಧ್ಯಯನ ಪ್ರಕಾರ, ದೆಹಲಿ (ಭಾರತ) ಸುತ್ತಮುತ್ತಲಿನ ಪ್ರದೇಶಗಳಲ್ಲಿ (ವಿವಿಧ ವಸತಿ ಸೊಸೈಟಿಗಳಲ್ಲಿ ವಾಸಿಸುವ) 60-80 ವಯಸ್ಸಿನ 55 ಮಂದಿ ಹಿರಿಯರಲ್ಲಿ ಏಕಾಕಿತನ ಹೆಚ್ಚುವುದರೊಂದಿಗೆ ಖಿನ್ನತೆಯ ಮಟ್ಟದಲ್ಲಿಯೂ ಹೆಚ್ಚಳ ಕಂಡುಬಂದಿದೆ. ಒಂಟಿತನ ಎಂಬುದು ಆಲ್ಕೋಹಾಲ್ ಅತಿಯಾದ ಸೇವನೆಗೆ ಕೊಡುಗೆ ನೀಡುವ, ನಿರ್ವಹಿಸುವ ಮುನ್ಸೂಚಕ ಅಂಶ ಎಂದು ತಿಳಿದುಬಂದಿದೆ.
ಇದಕ್ಕೆ ಕಾರಣ ಸಾಮಾಜಿಕ ಬೆಂಬಲದ ಕೊರತೆ ಮತ್ತು ಸಮುದಾಯದ ಒತ್ತಡದ ವಿಭಿನ್ನ ಗ್ರಹಿಕೆಗಳು. ಒಂಟಿತನವು ತೀವ್ರ ಒತ್ತಡದ ಮೂಲ ಮಾತ್ರವಲ್ಲ, ದೀರ್ಘಕಾಲದ ಒತ್ತಡವೂ ಆಗಲಿದೆ. ಇತ್ತೀಚೆಗೆ, ನ್ಯೂರೋಎಂಡೋಕ್ರೈನ್ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗಳು, ಏಕಾಂಗಿ ಲಕ್ಷಣಗಳು ಮತ್ತು ಸಹವರ್ತಿಯಾದ ಶಾರೀರಿಕ ಪ್ರಕ್ರಿಯೆಗಳ ಮೇಲೆ ಒತ್ತಡ ಬೀರುವ ಮಾನೋ- ಸಾಮಾಜಿಕ ಪರಿಣಾಮಗಳ ಕುರಿತು ವ್ಯಾಪಕವಾದ ಸಂಶೋಧನೆಗಳು ನಡೆದಿವೆ. ಒಂಟಿತನವು ದುರ್ಬಲಗೊಂಡ ಸೆಲ್ಯುಲಾರ್ ಪ್ರತಿರೋಧಕ್ಕೆ ಸಂಬಂಧಿಸಿದ್ದಾಗಿದೆ. ಇದು ನೈಸರ್ಗಿಕ ಕೊಲೆಗಾರ ( ಎನ್ ಕೆ ) ಜೀವಕೋಶದ ಚಟುವಟಿಕೆಯನ್ನು ಕಡಿಮೆ ಮಾಡುವ ಮತ್ತು ಆಂಟಿಬಾಡಿ ಟಿಟರ್ ಗಳನ್ನು ಹೆಚ್ಚಿಸುತ್ತದೆ. ಇದಲ್ಲದೆ, ಮಧ್ಯ ವಯಸ್ಕರಲ್ಲಿ ಒಂಟಿತನವು ಎನ್ ಕೆ ಜೀವಕೋಶಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿ ವಿವಿಧ ಕಾರ್ಯಗಳಿಗೆ ಸಂಬಂಧಿಸಿದಂತೆ ತೀವ್ರ ಒತ್ತಡ ಉಂಟುಮಾಡುತ್ತದೆ. ಆತ್ಮಹತ್ಯೆಯ ಕುರಿತಾದ ಸಂಶೋಧನೆಯ ಪ್ರಕಾರ ಆತ್ಮಹತ್ಯೆಯ ಕಲ್ಪನೆ, ಆತ್ಮಹತ್ಯೆ ಯತ್ನ ಹಾಗೂ ಒಂಟಿತನ ನಡುವೆ ಬಲವಾದ ಸಂಬಂಧ ಇದೆ ಎಂದು ತಿಳಿದುಬಂದಿದೆ. ಒಂಟಿತನ ಹೆಚ್ಚಾದಂತೆ ಆತ್ಮಹತ್ಯೆಯ ಕಲ್ಪನೆ ಮತ್ತು ಆತ್ಮಹತ್ಯೆ ಯತ್ನದಂತಹ ಕುಕೃತ್ಯಗಳು ಹೆಚ್ಚುತ್ತವೆ. ಒಂಟಿತನಕ್ಕೆ ಸಂಬಂಧಿಸಿದ ವಿವಿಧ ವ್ಯಕ್ತಿತ್ವ ಸಂಬಂಧಿ ಅಸ್ವಸ್ಥತೆಗಳು ಬಾರ್ಡರ್ ಲೈನ್ ಪರ್ಸನಾಲಿಟಿ ಡಿಸಾರ್ಡರ್ ( ಬಿ ಪಿ ಡಿ ) ಮತ್ತು ಸ್ಕಿಜಾಯ್ಡ್ ವ್ಯಕ್ತಿತ್ವ ಸಂಬಂಧಿ ಅಸ್ವಸ್ಥತೆಯನ್ನು ಒಳಗೊಂಡಿವೆ. ಒಂಟಿತನ ತಡೆಯದೇ ಹೋಗುವುದನ್ನು ಗಡಿರೇಖೆಯ ವ್ಯಕ್ತಿತ್ವ ಅಸ್ವಸ್ಥತೆಯ (ಬಿಪಿಡಿ) ಒಂದು ಪ್ರಮುಖ ಲಕ್ಷಣ ಎಂದು ಪರಿಗಣಿಸಲಾಗಿದೆ. ಒಂಟಿತನವು ಬಿಪಿಡಿಗೆ ಸಂಬಂಧಿಸಿದ ಇತರ ರೋಗಲಕ್ಷಣಗಳಿಗೆ ಕೂಡ ಕಾರಣ ಆಗುತ್ತದೆ. ಒಂಟಿತನಕ್ಕೆ ಸಂಬಂಧಿಸಿದ ದೀರ್ಘಕಾಲದ ಒತ್ತಡವು ಕಡಿಮೆ ದರ್ಜೆಯ ಬಾಹ್ಯ ಉರಿಯೂತಕ್ಕೆ ಕಾರಣ ಆಗಬಹುದು. ಕಡಿಮೆ ದರ್ಜೆಯ ಬಾಹ್ಯ ಉರಿಯೂತವು ಉರಿಯೂತದ ಕಾಯಿಲೆಗಳಿಗೆ ಸಂಬಂಧಿಸಿದೆ. ಉರಿಯೂತದ ಕಾಯಿಲೆಗಳಲ್ಲಿ ಮಧುಮೇಹ, ರುಮಟಾಯ್ಡ್ ಸಂಧಿವಾತದಂತಹ ಸ್ವಯಂ ನಿರೋಧಕ ಕಾಯಿಲೆಗಳು, ಲೂಪಸ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಾದ ಪರಿಧಮನಿ ಹೃದ್ರೋಗ, ಅಧಿಕ ರಕ್ತದೊತ್ತಡ (ಎಚ್‌ಟಿಎನ್) ಮತ್ತು ಒಟ್ಟು ಬಾಹ್ಯ ಪ್ರತಿರೋಧ (ಟಿಪಿಆರ್) ಸೇರಿವೆ. ಟಿಪಿಆರ್ ಪ್ರಾಥಮಿಕ ನಿರ್ಣಾಯಕವಾಗಿದ್ದು ಇದು ಟಿಪಿಆರ್ ನಲ್ಲಿ ಒಂಟಿತನ - ಸಂಬಂಧಿತ ಅತಿರೇಕಗಳು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು ಎಂದು ಸೂಚಿಸುತ್ತದೆ. ಒಂಟಿತನವುಸಾಮಾಜಿಕ ಯೋಗಕ್ಷೇಮದ ಪ್ರಮುಖ ಸೂಚಕಗಳಲ್ಲಿ ಒಂದಾಗಿದೆ. ಒಂಟಿತನವು ವಿವಿಧ ಮಾನಸಿಕ ಅಸ್ವಸ್ಥತೆಗಳು ಮತ್ತು ವಿವಿಧ ದೈಹಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
ವೈರಸ್ ಮತ್ತು ಪ್ರಪಂಚದ ಈಗಿನ ಸ್ಥಿತಿಯ ಕಾರಣದಿಂದಾಗಿ ನಾವು ಸಾರ್ವತ್ರಿಕವಾದ ಅನಿಶ್ಚಿತತೆಯ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಜಾಗತಿಕವಾಗಿ ಹಿಂದೆಂದೂ ಇಂತಹ ಸ್ಥಿತಿಯನ್ನು ಎದುರಿಸದ ಯುವ ಪೀಳಿಗೆಯಲ್ಲಿ ಇದು ಭಯ ಮತ್ತು ಆತಂಕ ಉಂಟುಮಾಡುತ್ತಿರುವಂತೆ ತೋರುತ್ತದೆ. ಸೂಚನೆ ನೀಡದೆ ಬಂದ ಬದಲಾವಣೆ ದುಃಖ ಉಂಟುಮಾಡುತ್ತಿದೆ ಎಂದು ಗ್ರಹಿಸಲಾಗಿದೆ. ಹಠಾತ್ ಸಾಮಾಜಿಕ ಪ್ರತ್ಯೇಕತೆಯು ಕೆಲವು ಜನರ ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಯು ಎನ್ ಸಿ ಸ್ಕೂಲ್ ಆಫ್ ಮೆಡಿಸಿನ್‌ನ ಮನೋವೈದ್ಯಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ. ಸಮಂತಾ ಮೆಲ್ಟ್ಜರ್ - ಬ್ರಾಡಿ ಅಭಿಪ್ರಾಯಪಟ್ಟಿದ್ದಾರೆ. “ತೊಂದರೆಗೆ ಈಡಾದಂತೆ, ನಿಜವಾಗಿಯೂ ನಷ್ಟ ಅನುಭವಿಸಿದಂತೆ ಹಾಗೂ ಹತಾಶೆಯು ಜನರಲ್ಲಿ ಸಂಪೂರ್ಣ ಸಹಜವಾಗಿಬಿಟ್ಟಿದೆ. ಚೀನಾದಲ್ಲಿ 3,281 ಸಾವಿಗೀಡಾಗಿದ್ದು 2020ರ ಮಾರ್ಚ್ 25ರ ತನಕ 7,503 ಸಾವುಗಳನ್ನು ಇಟಲಿ ಕಂಡಿದೆ. 2020ರ ಮಾರ್ಚ್ 26ರವರೆಗೆ ಭಾರತದಲ್ಲಿ ಒಟ್ಟಾರೆ 563 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇಂತಹ ಅನಿಶ್ಚಿತತೆಯನ್ನು ಮತ್ತು ಇದುವರೆಗೆ ಪ್ರತ್ಯೇಕತೆ ಅನುಭವಿಸಿಯೇ ಗೊತ್ತಿಲ್ಲದ ಜನರನ್ನು ನಿಭಾಯಿಸುವುದು ಹೇಗೆ ಎಂಬುದು ನಮ್ಮೆಲ್ಲರಿಗೂ ನಿಜವಾಗಿಯೂ ದೊಡ್ಡ ಸವಾಲಾಗಿದೆ” ಎನ್ನುತ್ತಾರೆ.
ಸಣ್ಣ ತಲೆನೋವು, ವಾಕರಿಕೆ ಅಥವಾ ಶೀತ ಮತ್ತು ಕೆಮ್ಮಿನ ಸಮಸ್ಯೆ ಕಾಣಿಸಿಕೊಂಡ ಜನ ಕೂಡ ತಾವು ಕೋವಿಡ್ 19 ಸೋಂಕಿಗೆ ತುತ್ತಾದ ಭಯ ಅನುಭವಿಸುತ್ತಾರೆ. ಕಳೆದ ಕೆಲವು ದಿನಗಳು ಅಥವಾ ವಾರಗಳಲ್ಲಿ ಜನರ ಸಾಮಾನ್ಯ ಪ್ರತಿಕ್ರಿಯೆಗಳು ಹೀಗಿವೆ.–ತಮ್ಮ ಆರೋಗ್ಯ ಮತ್ತು ದೇಹಕ್ಕೆ ಸಂಬಂಧಿಸಿದಂತೆ ವಿಪರೀತ ಜಾಗರೂಕತೆ, ಗೊಂದಲದ ಆಲೋಚನೆಗಳು, ಏಕಾಗ್ರತೆಯಿಂದ ದೈನಂದಿನ ದಿನಚರಿ ನಿರ್ವಹಿಸುವಲ್ಲಿನ ತೊಂದರೆಗಳು, ತಿನ್ನುವ ಅಥವಾ ನಿದ್ರೆಯ ರೂಢಿಗಳಲ್ಲಿನ ಬದಲಾವಣೆಗಳು, ಕೋಪ, ಆತಂಕ, ಚಿಂತೆ, ಭೀತಿ, ಅಸಹಾಯಕ ಭಾವನೆ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಉಲ್ಬಣ, ಔಷಧಿಗಳು, ಮದ್ಯ, ತಂಬಾಕು ಅಥವಾ ಇತರ ಮಾದಕ ವಸ್ತುಗಳ ಅತಿಯಾದ ಬಳಕೆ, ಸಾಮಾಜಿಕ ವಿಮುಖತೆ, ಖಿನ್ನತೆ ಮತ್ತು ಬೇಸರ, ಕೋಪ, ಹತಾಶೆ ಅಥವಾ ಕಿರಿಕಿರಿ ಹಾಗೂ ಅಪಮಾನ.
ಜನರು ಸ್ವಯಂ - ಅರಿವು ಮತ್ತು ಸ್ವಯಂ - ಆರೈಕೆಯ ಅಭ್ಯಾಸ ಮಾಡಿಕೊಳ್ಳಬೇಕು. ಅವರು ತಮ್ಮ ಆತಂಕ ನಿರ್ವಹಿಸುವ ವಿಧಾನಗಳನ್ನು ಅಭ್ಯಾಸ ಮಾಡಬೇಕು ಮತ್ತು ಸಂಪರ್ಕ ತಡೆ ಮತ್ತು ಪ್ರತ್ಯೇಕತೆಯ ಕುರಿತ ಮಾನಸಿಕ ಅಪಾಯಗಳನ್ನು ಕಡಿಮೆ ಮಾಡಿಕೊಳ್ಳಬೇಕು. ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳ ಬಗ್ಗೆ ನಾವು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ: ಮನೆಯಲ್ಲಿಯೇ ಇರಿ, ಸ್ವಯಂ-ಪ್ರತ್ಯೇಕಗೊಳ್ಳಿ, ಮತ್ತು ಸರಿಯಾದ ಕೈ ತೊಳೆಯುವ ತಂತ್ರಗಳನ್ನು ಅಭ್ಯಾಸ ಮಾಡಿ ಇತ್ಯಾದಿ. ಆದರೆ ನಕಾರಾತ್ಮಕ ಭಾವನೆಗಳನ್ನು ನಿಭಾಯಿಸುವ ವಿಧಾನಗಳ ಬಗ್ಗೆ ಅಪರೂಪದ ವರದಿಗಳು ಬರುತ್ತವೆ. ನಿವು ಒತ್ತಡ ನಿಭಾಯಿಸುವಿರಾದರೆ, ನಿಮ್ಮ ಬಗ್ಗೆ ಕಾಳಜಿವಹಿಸುವ ಜನರು ಮತ್ತು ನಿಮ್ಮ ಸಮುದಾಯ ಬಲವಾಗಲಿದೆ.
ಆರೋಗ್ಯ ಕುರಿತು ಹೆಚ್ಚಾದ ಆತಂಕ, ಕೊರೊನಾ ವೈರಸ್ ಪ್ರಕೋಪ ಉಂಟುಮಾಡಿರುವ ಚಿಂತೆ, ಹತಾಶೆಯನ್ನು ನಿರ್ವಹಿಸುವ ಕೆಲವು ವಿಧಾನಗಳು ಹೀಗಿವೆ:
1. ನಿರ್ದಿಷ್ಟ ಸಂಗತಿಗಳು: – ಕೇವಲ ಕೊರೊನಾ ವೈರಸ್‌ಗೆ ಸಂಬಂಧಿಸಿದ ಸುದ್ದಿಗಳಿಗೆ ಮಾತ್ರ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ, ಚಿಂತೆ ಮತ್ತು ಆತಂಕದ ಭಾವನೆಗಳು ಉತ್ತುಂಗದಲ್ಲಿ ಇರುತ್ತವೆ. ಆರೋಗ್ಯ ಸುಧಾರಣಾ ಕ್ರಮಗಳ ಕುರಿತ ತಾಜಾ ಮಾಹಿತಿ ಮತ್ತು ತಪ್ಪುಗ್ರಹಿಕೆಯನ್ನು ನಿಯಂತ್ರಿಸುವ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ ಇಂತಹ ಸಮಸ್ಯೆ ತಪ್ಪಿಸಬಹುದು.
2. ಊಹೆ ಬೇಡ ಆತಂಕವೂ ಬೇಡ: ಶೀತ, ಕೆಮ್ಮು ಅಥವಾ ಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆ ಕೊರೊನಾ ವೈರಸ್ ಇರುತ್ತದೆ ಎಂದೇನೂ ಅಲ್ಲ. ಅನುಮಾನ ಇದ್ದರೆ ನಿಮ್ಮ ವೈದ್ಯರಿಗೆ ಕರೆ ಮಾಡಿ.
3. ಸಾಮಾಜಿಕ ಮಾಧ್ಯಮಗಳ ಮೇಲೆ ಹತೋಟಿ ಇರಲಿ- ಸುತ್ತಮುತ್ತಲಿನ ಜನರು ಒಂದೇ ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದರೆ ನೀವೂ ಕೂಡ ಅಂತಹ ಸಮೂಹ ಸನ್ನಿಯಿಂದ ಒಂಟಿಯಾಗಿರಲು ಸಾಧ್ಯ ಇಲ್ಲ. ಫೇಸ್‌ಟೈಮ್, ಸ್ಕೈಪ್, ವಾಟ್ಸಾಪ್, ಫೇಸ್‌ಬುಕ್ ಮತ್ತು ಕರೆ ಮಾಡುವುದರ ಮೂಲಕ ದೂರದಲ್ಲೇ ಇದ್ದರೂ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ.
4. ಬಿಚ್ಚಿಕೊಳ್ಳುವ ಸಮಯ- ಸರ್ಕಾರ ಮತ್ತು ಆರೋಗ್ಯ ಸಂಸ್ಥೆ ಪಟ್ಟಿ ಮಾಡಿದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳಿ, ವಿಶ್ರಾಂತಿ, ಧ್ಯಾನ ಮತ್ತು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವ ಕಡೆಗೆ ನಿಮ್ಮನ್ನು ತೊಡಗಿಸಿಕೊಳ್ಳಿ.
5. ನಿಯಮಿತ ದಿನಚರಿ ಮುಂದುವರಿಸಿ - ಶಾಲಾ ಕಾಲೇಜುಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚುವ ಮೂಲಕ ಸರ್ಕಾರ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ನಿಮ್ಮ ಚಟುವಟಿಕೆಗಳನ್ನು ನಿಗದಿಪಡಿಸಿಕೊಳ್ಳಿ ಅಥವಾ ನೀವು ನಿಮ್ಮೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುವಂತಹ ಕೆಲಸ ಮಾಡಿ. ಕೆಲವು ಮೋಜಿನ ಚಟುವಟಿಕೆಗಳು ಅಥವಾ ಕಳೆದುಹೋದ ಹವ್ಯಾಸಗಳನ್ನು ಮತ್ತೆ ಆರಂಭೀಸುವುದು ನಿಮ್ಮನ್ನು ಶಾಂತವಾಗಿ ಇರಿಸುತ್ತದೆ.
6. ಚಿಂತೆಯ ಧಾರೆಗೆ ಒಡ್ಡಿಕೊಳ್ಳದಿರಿ - ಸುದ್ದಿಯ ಸುಳಿಯಲ್ಲಿ ಸಿಲುಕುವುದನ್ನು ಕಡಿಮೆ ಮಾಡಿ. ಸಾಂಕ್ರಾಮಿಕ ರೋಗದ ಬಗ್ಗೆಯೇ ಪದೇ ಪದೇ ಕೇಳುವುದು ಅಸಮಾಧಾನ ಉಂಟು ಮಾಡುತ್ತದೆ.
7. ಸಾಕುಪ್ರಾಣಿಗಳ ಬಗ್ಗೆ ಎಚ್ಚರ: ಭಾವನಾತ್ಮಕ ಬೆಂಬಲಕ್ಕಾಗಿ ಸಾಕುಪ್ರಾಣಿಗಳನ್ನು ಅವಲಂಬಿಸುವುದರಿಂದ ಮಾನವರು ಮತ್ತು ಪ್ರಾಣಿಗಳ ನಡುವೆ ರೋಗ ಪ್ರಸರಣಕ್ಕೆ ಕಾರಣವಾಗುತ್ತದೆ ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.
8. ಹಂಚಿಕೊಳ್ಳಿ ಮತ್ತು ಕಾಳಜಿ ಇರಲಿ: ಅತೃಪ್ತಿಯ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಒತ್ತಡ ನಿವಾರಣಾ ವಿಧಾನ ಅಳವಡಿಸಿಕೊಳ್ಳಿ. ಇದು ಎಲ್ಲವೂ ಸಹಜವಾಗಿದೆ ಎಂಬ ಪ್ರಜ್ಞೆಯನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಆತಂಕ ನಿಯಂತ್ರಣಕ್ಕೆ ಬಾರದಿದ್ದರೆ ಮನಶಾಸ್ತ್ರಕ್ಕೆ ಸಂಬಂಧಿಸಿದ ವೃತ್ತಿಪರರನ್ನು ಸಂಪರ್ಕ ಮಾಡಿ.
ಏನಾದರೂ ಕಂಡರೆ ಹೀಗೆ ಏನಾದರೂ ಮಾಡಿ !
ಆಯಾ ರಾಜ್ಯಗಳಲ್ಲಿ ಲಭ್ಯ ಇರುವ ಸಹಾಯವಾಣಿ ಸಂಖ್ಯೆಗಳಿಗೆ ಕರೆಮಾಡಿ ನಿಮ್ಮ ದೈಹಿಕ ಸ್ಥಿತಿ ಮತ್ತು ಅನುಮಾನಗಳನ್ನು ಪರಿಹರಿಸಿಕೊಳ್ಳಿ. ಕೌನ್ಸೆಲಿಂಗ್ ಮತ್ತು ಮಾನಸಿಕ ಸೇವೆಗಳು ಕೂಡ ಲಭ್ಯ ಇವೆ.
- ಡಿ. ಆರ್. ಋತು ತ್ರಿವೇದಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಗಾಂಧಿನಗರ ( ಐ ಐ ಪಿ ಎಚ್ ಜಿ )