ಮಹಾರಾಷ್ಟ್ರ: ಕೊರೊನಾ ಸೋಂಕಿತ ಮಹಿಳೆಯರಿಬ್ಬರು ಮಗುವಿಗೆ ಜನ್ಮ ನೀಡಿದ್ದು, ಅದೃಷ್ಟವಶಾತ್ ಕಂದಮ್ಮಗಳ ಕೋವಿಡ್-19 ಪರೀಕ್ಷಾ ವರದಿ ನೆಗಟಿವ್ ಎಂದು ಬಂದಿದೆ.
ಮಹಾರಾಷ್ಟ್ರದ ಔರಂಗಾಬಾದ್ನಲ್ಲಿ ಕೊರೊನಾ ಸೋಂಕಿತ ಮಹಿಳೆಯೊಬ್ಬರು ಶನಿವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವಿಗೂ ಕೋವಿಡ್-19 ಪರೀಕ್ಷೆ ಮಾಡಲಾಗಿದ್ದು, ಮಗುವಿಗೆ ಸೋಂಕು ತಗುಲಿಲ್ಲ ಎಂಬುದು ದೃಢಪಟ್ಟಿದೆ. ಆದರೂ ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ವೈದ್ಯರು ಮತ್ತು ನರ್ಸ್ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುಂದರ್ ಕುಲಕರ್ಣಿ ತಿಳಿಸಿದ್ದಾರೆ.
ಇನ್ನು ಪುಣೆಯಲ್ಲಿ ಕೂಡ ಇಂತಹದ್ದೇ ಘಟನೆ ನಡೆದಿದೆ. ಏ.16 ರಂದು ಇಲ್ಲಿನ ಸಸೂನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 25 ವರ್ಷದ ಸೋಂಕಿತ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿನ ಕೋವಿಡ್-19 ಪರೀಕ್ಷಾ ವರದಿ ಕೂಡ ನೆಗಟಿವ್ ಎಂದು ಬಂದಿದ್ದು, ತಾಯಿ ಮತ್ತು ಮಗುವನ್ನು ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.
ಕಂದಮ್ಮಗಳಿಗೆ ಸೋಂಕು ಅಂಟದ ಕಾರಣ ಎರಡೂ ಕುಟುಂಬಗಳ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ.