ನವದೆಹಲಿ : ಕೊರೊನಾ ವೈರಸ್ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹ ಸುಮಾರು 15 ಗಂಟೆಗಳ ಕಾಲ ಮನೆಯಲ್ಲೇ ಇದ್ದ ಘಟನೆ ನಗರದ ಈಶಾನ್ಯ ಭಾಗದ ಉಸ್ಮಾನ್ಪುರದಲ್ಲಿ ನಡೆದಿದೆ. ಈ ಬಗ್ಗೆ ಸಹಾಯವಾಣಿಗೆ ಕರೆ ಮಾಡಿದರೂ ಯಾರೂ ಸಹಾಯಕ್ಕೆ ಬಂದಿಲ್ಲ ಎಂದು ಮೃತರ ಕುಟುಂಬಸ್ಥರು ದೂರಿದ್ದಾರೆ.
ಸಹಾಯಕ್ಕೆ ಬಾರದ ಸಹಾಯವಾಣಿ:
ತಂದೆಯ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ (ಆರ್‌ಡಬ್ಲ್ಯೂಎ) ಸಹಾಯದಿಂದ ಅವರಿಗೆ ಜೂನ್ 13 ರಂದು ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಜೂನ್ 14 ರಂದು ಬಂದ ವರದಿಯಲ್ಲಿ ಅವರಿಗೆ ಕೊರೊನಾ ತಗುಲಿರುವುದು ಗೊತ್ತಾಗಿದೆ. ಆದರೆ, ಆಸ್ಪತ್ರೆಗಳ ದುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಂದೆ ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದರು ಮತ್ತು ಮನೆಯಲ್ಲೇ ತಮ್ಮನ್ನು ತಾವು ಐಸೊಲೇಟ್ ಮಾಡಿಕೊಂಡಿದ್ದರು. ಆದರೆ ಆರೋಗ್ಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಟ್ಟಾಗ ನಾವು ಸಹಾಯವಾಣಿಯ ಸಹಾಯ ಪಡೆಯಲು ಕರೆ ಮಾಡಿದೆವು. ಸುಮಾರು 2 ಗಂಟಗಳ ಕಾಲ ಪ್ರಯತ್ನಿಸಿದರೂ ಸಹಾಯವಾಣಿ ಕಾರ್ಯನಿರತವಾಗಿದೆ ಎಂದೇ ಹೇಳುತ್ತಿತ್ತು. ಹೀಗಾಗಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ನಮ್ಮ ತಂದೆ ಮೃತಪಟ್ಟರು ಎಂದು ಮಗಳು ಅಳಲು ತೋಡಿಕೊಂಡಿದ್ದಾರೆ.
ಮೃತದೇಹ ಕೊಂಡೊಯ್ಯಲು ಆಂಬುಲೆನ್ಸ್ ಬರಲಿಲ್ಲ:
ತಂದೆಯ ಮರಣದ ನಂತರ ನಾವು ಆಂಬ್ಯುಲೆನ್ಸ್‌ಗೆ ಕರೆ ಮಾಡುತ್ತಲೇ ಇದ್ದೆವು. ಆದರೆ ಗಂಟೆಗಟ್ಟಲೆ ಕರೆ ಮಾಡಿದರೂ ಆಂಬುಲೆನ್ಸ್ ಬರಲೇ ಇಲ್ಲ. ಬಳಿಕ ಸ್ಥಳೀಯ ಸ್ಥಳೀಯ ನಿವಾಸಿ ಕ್ಷೇಮಾಭಿವೃದ್ಧಿ ಸದಸ್ಯರಿಗೆ ಮಾಹಿತಿ ನೀಡಿದೆವು. ಅವರು ಆ್ಯಂಬುಲೆನ್ಸ್ ರಿಪೇರಿಗೆ ಹೋಗಿದೆ ಎಂದು ಸಬೂಬು ಹೇಳಿದರು. ಹೀಗಾಗಿ ತಂದೆಯ ಮೃತದೇಹ ಸುಮಾರು 15 ಗಂಟೆಗಳ ಸಮಯ ಮನೆಯಲ್ಲೇ ಇತ್ತು.
ದೆಹಲಿಯಲ್ಲಿ ಇದು ಮೊದಲ ಪ್ರಕರಣವಲ್ಲ, ಇಂತಹ ಅನೇಕ ಘಟನೆಗಳು ನಡೆಯುತ್ತಲೇ ಇವೆ. ಇಷ್ಟಾದರೂ ಆರೋಗ್ಯ ಸೇವೆಗಳ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಹಿಂಜರಿಯುತ್ತಿವೆ ಎಂದು ಪುತ್ರಿ ಆರೋಪಿಸಿದ್ದಾರೆ.