ನವದೆಹಲಿ: ಕಾಂಗ್ರೆಸ್ನಲ್ಲಿ ಉಂಟಾಗಿರುವ ನಾಯಕತ್ವದಲ್ಲಿನ ಒಳಜಗಳದ ಬಗ್ಗೆ ಇದೀಗ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮಾತನಾಡಿದ್ದಾರೆ.
ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು, ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು ಹೊಸದಾಗಿ ಆಯ್ಕೆ ಮಾಡುವಂತೆ ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ನಾಯಕತ್ವ ವಿಚಾರವಾಗಿ 23 ಕೈ ಮುಖಂಡರು ಪತ್ರ ಬರೆದ ಬಳಿಕ ಕಾರ್ಯಕಾರಿ ಸಭೆ ನಡೆಸಲಾಗಿತ್ತು. ಈ ವೇಳೆ ಹಲವು ಹಗ್ಗಜಗ್ಗಾಟದ ಬಳಿಕ ಮುಂದಿನ ಕೆಲ ತಿಂಗಳ ಕಾಲ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರೆಯುವಂತೆ ತಿಳಿಸಲಾಗಿತ್ತು.
ಈ ಸಭೆ ಮುಗಿದ ನಾಲ್ಕು ದಿನಗಳ ಬಳಿಕ ಮಾತನಾಡಿರುವ ಗುಲಾಮ್ ನಬಿ ಆಜಾದ್, ಪತ್ರದಲ್ಲಿ ನಾವು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರ ಸಮರ್ಥನೆ ಮಾಡಿದ್ದೇವೆ. ಪತ್ರ ಬರೆದ ಮಾತ್ರಕ್ಕೆ ನಮ್ಮಲ್ಲಿ ಭಿನ್ನಾಭಿಪ್ರಾಯವಿದೆ ಎಂಬುದಲ್ಲ. ಪಕ್ಷದ ಅಭಿವೃದ್ಧಿಗಾಗಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ.
ಕಾರ್ಯಕಾರಿ ಸಭೆಯಲ್ಲಿ ಕೇವಲ 1 ತಿಂಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಿಳಿಸಿದ್ದಾರೆ. ಆದರೆ ಸದ್ಯದ ಕೋವಿಡ್ ಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಹೀಗಾಗಿ ಮುಂದಿನ ಆರು ತಿಂಗಳ ಕಾಲ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯುವಂತೆ ಮನವಿ ಮಾಡಲಾಗಿದೆ ಎಂದರು. ಪತ್ರದಲ್ಲಿ ಪಕ್ಷದಲ್ಲಿನ ಸುಧಾರಣೆ, ಆಂತರಿಕ ಚುನಾವಣೆ, ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಬಗ್ಗೆ ಮಾಹಿತಿ ನೀಡಲಾಗಿತ್ತು ಎಂದು ಅವರು ಹೇಳಿದರು.