ಭಾವನಗರ(ಗುಜರಾತ್): ಅನೇಕ ಬಾರಿ ಮಕ್ಕಳು ತಮ್ಮ ಕೆಲ ನಿರ್ಧಾರಗಳಿಂದ ಹಿರಿಯರಿಗೆ ಮಾದರಿಯಾಗುತ್ತಾರೆ. ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್ ಉಳಿತಾಯವನ್ನು ವೈರಸ್ ವಿರೋಧಿ ಅಭಿಯಾನಕ್ಕಾಗಿ ದೇಣಿಗೆ ನೀಡಿದ್ದಾರೆ.
ಉತ್ತರ ಪ್ರದೇಶದ ಗೋರಖ್‌ಪುರ ಮೂಲದ ಮಹೇಶ್‌ಭಾಯ್ ಪಾಂಡೆ ಗುಜರಾತ್ನ ಭಾವನಗರದ ಶಿಕ್ಷಣ ಇಲಾಖೆಯ ಕಚೇರಿಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಕಳೆದ ನಾಲ್ಕು ತಲೆಮಾರುಗಳಿಂದ ಗುಜರಾತ್‌ನಲ್ಲಿ ವಾಸಿಸುತ್ತಿರುವ ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಮಗ ರುದ್ರ ಐದನೇ ತರಗತಿಯಲ್ಲಿ ಓದುತ್ತಿದ್ದರೆ, ಮಗಳು ಶ್ರೀ ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಈ ಇಬ್ಬರು ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕಿ(ಮಕ್ಕಳು ಕೂಡಿಟ್ಟ ಹುಂಡಿ ಹಣ)ನಲ್ಲಿ 5,555 ರೂ.ಗಳನ್ನು ಉಳಿಸಿದ್ದರು. ಅಲ್ಲದೆ ಆ ಹಣದಲ್ಲಿ ಬೈಸಿಕಲ್ ಖರೀದಿಸಲು ಯೋಜಿಸಿದ್ದರು. ಆದರೆ ಈಗ ಅವರು ಪೋಷಕರನ್ನೇ ಅಚ್ಚರಿಗೊಳಿಸುವ ಮೂಲಕ 5,555 ರೂ.ಗಳ ಚೆಕ್ ಅನ್ನು ಪ್ರಧಾನ ಮಂತ್ರಿಯ ಪರಿಹಾರ ನಿಧಿಗೆ ಕಳುಹಿಸಿದ್ದಾರೆ.
ಈ ಇಬ್ಬರು ಮಕ್ಕಳು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಆಗಾಗ್ಗೆ ಕೈ ತೊಳೆಯುವುದರ ಮಹತ್ವವನ್ನು ವಿವರಿಸುವ ವೀಡಿಯೊವನ್ನು ತಯಾರಿಸಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ತಂದೆ ಕೂಡಾ ತಮ್ಮ ಸ್ಮಾರ್ಟ್ ಫೋನ್ ಮೂಲಕ ವೀಡಿಯೊವನ್ನು ತಮ್ಮ ಕಾಂಟ್ಯಾಕ್ಟ್ಗಳಿಗೆ ಕಳಿಸಿದ್ದಾರೆ.