ನವದೆಹಲಿ: ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಗುಣಮಟ್ಟ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದಾರೆ.
ವಾಯು ಮಾಲಿನ್ಯ ಸಂಪೂರ್ಣವಾಗಿ ಕುಸಿದ ಕಾರಣ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು, ರಸ್ತೆಗಿಳಿಯುವುದಕ್ಕೂ ಮುಂಚಿತವಾಗಿ ಜನರು ಮಾಸ್ಕ್ ಹಾಕಿಕೊಂಡು ಮನೆಯಿಂದ ಹೊರ ಬರುತ್ತಿದ್ದಾರೆ. ಆದರೆ ಹೊಟ್ಟೆ ಪಾಡಿಗಾಗಿ ರಸ್ತೆಗಳಲ್ಲಿ ವ್ಯಾಪಾರ ನಡೆಸುವ ಮಕ್ಕಳ ಸ್ಥಿತಿ ಹೇಳತೀರದಾಗಿದೆ.
ಪ್ರಮುಖ ರಸ್ತೆ, ಟ್ರಾಫಿಕ್ ಸಿಗ್ನಲ್ಗಳಲ್ಲಿ ವ್ಯಾಪಾರ ನಡೆಸುತ್ತಿರುವ ಮಕ್ಕಳು ಮಾಸ್ಕ್ ಹಾಕಿಕೊಳ್ಳಲು ಹಣವಿಲ್ಲದೇ ವ್ಯಾಪಾರ ನಡೆಸುವಂತಹ ಸ್ಥಿತಿ ಉದ್ಭವವಾಗಿದೆ. ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಬಾಲಕನೋರ್ವ, ಮಾಸ್ಕ್ ತೆಗೆದುಕೊಳ್ಳಲು ನಮ್ಮ ಬಳಿ ಹಣವಿಲ್ಲ. ಪ್ರತಿದಿನ ಇಂತಹ ಪರಿಸ್ಥಿತಿಯಲ್ಲೇ ಬದುಕು ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾನೆ.
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಮತ್ತೆ ಗಂಭೀರ ಸ್ಥಿತಿ ತಲುಪಿದೆ. ಹಾಗಾಗಿ ಈ ಭಾಗಗಳಲ್ಲಿ ನವೆಂಬರ್ 14 ಮತ್ತು 15ರಂದು ಶಾಲೆಗಳಿಗೆ ರಜೆ ಘೋಷಿಸಿ ಸರಕಾರ ಆದೇಶ ಹೊರಡಿಸಿದೆ. ಇದೇ ರೀತಿಯಲ್ಲಿ ನೋಯ್ಡಾದಲ್ಲೂ ಶಾಲೆಗಳಿಗೆ ಮುಂದಿನ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.