ನವದೆಹಲಿ: 2021 ರ ಜುಲೈ, ಆಗಸ್ಟ್ ವೇಳೆಗೆ ಸುಮಾರು 25ರಿಂದ 30 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿದೆ ಎಂದು ಸಚಿವ ಹರ್ಷವರ್ಧನ್ ಹೇಳಿದ್ದಾರೆ.
2021ರ ಮೊದಲಾರ್ಧದಲ್ಲಿ ದೇಶದ ಜನರಿಗೆ ಲಸಿಕೆ ನೀಡುವ ಸಾಧ್ಯತೆಯಿದೆ. ಅದಕ್ಕೆ ನಾವು ಈಗಿನಿಂದಲೇ ತಯಾರಿ ನಡೆಸುತ್ತಿದ್ದೇವೆ ಎಂದರು.
ಐಆರ್‌ಸಿಎಸ್ ಅಧ್ಯಕ್ಷರೂ ಆಗಿರುವ ಡಾ. ಹರ್ಷವರ್ಧನ್, ಇಂದು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಬಳಿಕ ಮಾತನಾಡಿದ ಅವರು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಕೋವಿಡ್ನಿಂದ ರಕ್ಷಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ಕೋವಿಡ್ ವಿರುದ್ಧದ ಹೋರಾಟದಲ್ಲಿ 11 ತಿಂಗಳು ಪೂರೈಸಲಿದ್ದೇವೆ. ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸ್ವಚ್ಛತೆ, ದೈಹಿಕ ಅಂತರದ ನಿಯಮಗಳನ್ನು ಪಾಲಿಸಬೇಕಿದೆ. ಸ್ಯಾನಿಟೈಸರ್ ಮತ್ತು ಮಾಸ್ಕ್ ವೈರಸ್ ವಿರುದ್ಧ ಹೋರಾಡಲು ಇರುವ ಆಯುಧಗಳಾಗಿವೆ ಎಂದರು.
ಇಡೀ ವಿಶ್ವದಲ್ಲೇ ಭಾರತದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಹೆಚ್ಚಿದೆ. 2020ರ ಜನವರಿಯಲ್ಲಿ ನಾವು ಕೇವಲ 1 ಲ್ಯಾಬ್ ಹೊಂದಿದ್ದವು. ಈಗ 2,165 ಲ್ಯಾಬ್ಗಳನ್ನು ಹೊಂದಿದ್ದು, ನಿತ್ಯ 10 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ತಪಾಸಣೆ ಮಾಡುತ್ತಿದ್ದೇವೆ. ಪ್ರಧಾನಿ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಮಾಸ್ಕ್, ಪಿಪಿಇ ಕಿಟ್, ವೆಂಟಿಲೇಟರ್ ತಯಾರಿಕೆಯಲ್ಲಿ ಭಾರತ ಸ್ವಾವಲಂಬಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಪಿಪಿಇ ಕಿಟ್‌ಗಳನ್ನು ತಯಾರಿಸಲಾಗುತ್ತಿದೆ. ಇದೀಗ ನಮ್ಮ ವಿಜ್ಞಾನಿಗಳು ಲಸಿಕೆ ಸಂಶೋಧನೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.