ನವದೆಹಲಿ: ದೇಶದಲ್ಲಿ ದಿನೇ ದಿನೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದೀಗ ಕೋವಿಡ್ ತಡೆಯಲು ಮತ್ತಷ್ಟು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ನೂತನ ವಿಧಾನಗಳನ್ನು ಅನುಸರಿಸುತ್ತಿದೆ.
ಕೊರೊನಾ ವೈರಸ್ ಸೋಂಕಿತರು ಹೆಚ್ಚಾಗಿರುವ ದೇಶದ 50 ಪುರಸಭೆಗಳ ವ್ಯಾಪ್ತಿಯಲ್ಲಿ ಉನ್ನತ ಮಟ್ಟದ ಕೇಂದ್ರ ತಂಡಗಳನ್ನು ನಿಯೋಜಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಕೇಂದ್ರಾಡಳಿತ ಪ್ರದೇಶ, 15 ರಾಜ್ಯಗಳ 50 ಜಿಲ್ಲೆಗಳು ಅಥವಾ ಪುರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಇಲ್ಲಿ ಈ ತಂಡಗಳನ್ನು ನಿಯೋಜಿಸಿರುವುದಾಗಿ ತಿಳಿಸಿದೆ. ಈ ತಂಡಗಳು ಆಯಾ ರಾಜ್ಯ ಸರ್ಕಾರಗಳಿಗೆ ಅಗತ್ಯವಾದ ನೆರವು ನೀಡಲಿವೆ.
ಮಹಾರಾಷ್ಟ್ರ, ತಮಿಳುನಾಡಿನಲ್ಲಿ ತಲಾ 7 ತಂಡಗಳು, ಅಸ್ಸೋಂ-6, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ ತಲಾ 5, ಕರ್ನಾಟಕ, ತೆಲಂಗಾಣ, ಹರಿಯಾಣ, ಉತ್ತರಪ್ರದೇಶ, ಬಿಹಾರದಲ್ಲಿ ತಲಾ 4, ದೆಹಲಿ, ಗುಜರಾತ್, ಉತ್ತರಾಖಂಡ್ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ 3 ತಂಡಗಳನ್ನು ನಿಯೋಜಿಸಿದೆ.
ಆರೋಗ್ಯ ತಜ್ಞರು, ಹಿರಿಯ ಜಂಟಿ ಕಾರ್ಯದರ್ಶಿ ಮಟ್ಟದ ನೋಡಲ್ ಅಧಿಕಾರಿ ಸೇರಿ ಮೂವರು ಒಂದೊಂದು ತಂಡದಲ್ಲಿ ಇದ್ದಾರೆ. ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಇನ್ನೂ ಕೈಗೊಳ್ಳಬಹುದಾದ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ಈ ತಂಡಗಳು ನೀಡುವ ಮೂಲಕ ಕೋವಿಡ್ ಹರಡದಂತೆ ತಡೆಗಟ್ಟಲು ಸರ್ಕಾರಕ್ಕೆ ನೆರವಾಗಲಿವೆ.