ನವದೆಹಲಿ: ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಇದರ ಮಧ್ಯೆ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಇದರ ಮಧ್ಯೆ ಇದೀಗ ಕೇಂದ್ರ ಸರ್ಕಾರ ಮತ್ತಷ್ಟು ಸಡಿಲಿಕೆ ಮಾಡಿ ಅನ್ಲಾಕ್ 3.0 ಜಾರಿಗೊಳಿಸುವ ಸಾಧ್ಯತೆ ದಟ್ಟವಾಗಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಲವೊಂದು ಷರತ್ತುಗಳೊಂದಿಗೆ ದೇಶಾದ್ಯಂತ ಸಿನಿಮಾ ಹಾಲ್, ಜಿಮ್ ಓಪನ್ ಮಾಡಲು ಕೇಂದ್ರ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದ್ದು, ಕೇವಲ ಶೇ. 25ರಿಂದ 30ರಷ್ಟು ಜನರಿಗೆ ಮಾತ್ರ ಅವಕಾಶ ನೀಡುವ ಸಾಧ್ಯತೆ ಇದೆ.
ಆದರೆ ದೇಶದಲ್ಲಿನ ಶಾಲಾ-ಕಾಲೇಜುಗಳು ಬಂದ್ ಆಗಿರಲಿದ್ದು, ಆನ್ಲೈನ್ ಕ್ಲಾಸ್ಗಳು ಮುಂದುವರೆಯಲಿವೆ. ಇದೇ ವೇಳೆ ದೆಹಲಿ ಸರ್ಕಾರ ಮೆಟ್ರೋ ಸಂಚಾರಕ್ಕೆ ಅವಕಾಶ ಮಾಡಿಕೊಡಲು ಕೇಳಿಕೊಂಡಿದ್ದು, ಇಲ್ಲಿಯವರೆಗೆ ಕೇಂದ್ರದಿಂದ ಯಾವುದೇ ರೀತಿಯ ನಿರ್ಧಾರ ಹೊರಬಿದ್ದಿಲ್ಲ. ಮುಂದಿನ ತಿಂಗಳಿಂದ ದೇಶದಲ್ಲಿ ಅತಿ ಹೆಚ್ಚು ಹಬ್ಬಗಳು ಬರುವ ಕಾರಣ ಸಾಮಾಜಿಕ ಅಂತರದೊಂದಿಗೆ ಕೆಲವೊಂದು ಸಡಿಲಿಕೆ ನೀಡಲು ಕೇಂದ್ರ ಮುಂದಾಗಿದೆ ಎನ್ನಲಾಗುತ್ತಿದೆ.
ದೇಶದಲ್ಲಿ ಸದ್ಯ ಅನ್ಲಾಕ್ 2.0 ಜಾರಿಯಲ್ಲಿದ್ದು, ಅದರ ಪ್ರಕಾರ ಶಾಪಿಂಗ್ ಮಾಲ್, ಮಾರ್ಕೆಟ್, ಸ್ಥಳೀಯ ಬಸ್ ಸೇವೆ, ವಿಮಾನಯಾನ ಸೇವೆ ಸೇರಿದಂತೆ ಕೆಲವೊಂದು ಸೇವೆಗಳು ಜನರಿಗೆ ಲಭ್ಯವಾಗುತ್ತಿವೆ. ದೇಶಾದ್ಯಂತ ಈಗಾಗಲೇ 14.35 ಲಕ್ಷ ಕೋವಿಡ್ ಪ್ರಕರಣಗಳಿದ್ದು, 32,771 ಜನರು ಸಾವನ್ನಪ್ಪಿದ್ದಾರೆ.