ನವದೆಹಲಿ : ಮೋದಿ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಭ್ರಷ್ಟರ ಭೇಟೆಯಾಡಲು ಶುರು ಮಾಡಿದೆ. ಇದೀಗ ಕೇಂದ್ರ ಸರ್ಕಾರದ 12 ಮಂದಿ ಉನ್ನತ ಹುದ್ದೆಯಲ್ಲಿರುವ ತೆರಿಗೆ ಅಧಿಕಾರಿಗಳಿಗೆ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕೇಂದ್ರ ಹಣಕಾಸು ಸಚಿವಾಲಯವು ಕಡ್ಡಾಯ ನಿವೃತ್ತಿ ಘೋಷಿಸಿದೆ.
ಈ 12 ಮಂದಿ ಅಧಿಕಾರಿಗಳ ಪೈಕಿ 8 ಮಂದಿಯನ್ನು ಸಿಬಿಐ ತನಿಖೆ ನಡೆಸಿ ನಂತರ ಈ ಕಡ್ಡಾಯ ನಿವೃತ್ತಿಯ ನಿರ್ಧಾರವನ್ನು ಕೈಗೊಳ್ಳಲಾಗಿದೆ ಅಂತಾ ಹೇಳಲಾಗಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ತೆರಿಗೆ ಅಧಿಕಾರಿಗಳ ಮೇಲೆ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಎಂದು ಹೇಳಲಾಗಿದೆ. ಈ ಕಡ್ಡಾಯ ನಿವೃತ್ತಿಗೆ ಒಳಗಾಗಿರುವ ಅಧಿಕಾರಿಗಳು ಹೈ ರ್ಯಾಂಕಿಂಗ್ನಲ್ಲಿದ್ದು, ಹಲವರು ಕಮಿಷನರ್, ಚೀಫ್ ಕಮಿಷನರ್ ಮತ್ತು ಪ್ರಿನ್ಸಿಪಾಲ್ ಕಮಿಷನರ್‌ಗಳೂ ಕೂಡ ಈ ಪಟ್ಟಿಯಲ್ಲಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿದ್ದ ನೋಯ್ಡಾದ ಐಆರ್‌ಎಸ್ ಅಧಿಕಾರಿ ಒಬ್ಬರು, 3.17 ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಹೊತ್ತಿರುವ ಮತ್ತೊಬ್ಬ ಹಿರಿಯ ಅಧಿಕಾರಿ. ಐಟಿ ಇಲಾಖೆಯ ಆಯುಕ್ತರೊಬ್ಬರು, ಸಿಬಿಐನ ಹಣಕಾಸು ವಿಭಾಗದ ಮುಖ್ಯ ಅಧಿಕಾರಿ ಹೀಗೆ ಹಲವು ಅಧಿಕಾರಿಗಳನ್ನು ಕಡ್ಡಾಯ ನಿವೃತ್ತಿ ನೀಡಿ ಕಳುಹಿಸಲಾಗಿದೆ. ಈ ಮಹತ್ವದ ನಿರ್ಧಾರವನ್ನು ನಿರ್ಮಲ ಸೀತಾರಾಮನ್ ಮುಖ್ಯಸ್ಥರಾಗಿರುವ ಹಣಕಾಸು ಸಚಿವಾಲಯ ಕೈಗೊಂಡಿದೆ.