ಚೆನ್ನೈ: ಭಾರೀ ಮಳೆಗೆ ವಿದ್ಯುತ್ ತಂತಿವೊಂದು ತುಂಡರಿಸಿ ಬಿದ್ದಿದ್ದು, ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಮಹಿಳೆಯೋರ್ವಳು ಅದರ ಮೇಲೆ ಕಾಲಿಟ್ಟಿರುವ ಪರಿಣಾಮ ವಿದ್ಯುತ್ ಪ್ರವಾಹಕ್ಕೊಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ತಮಿಳುನಾಡಿನ ಪುಲಿಯಾಂಥೊಪ್ಪು ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ವಿದ್ಯುತ್ ತಂತಿ ಹರಿದು ಬಿದ್ದಿದೆ. ಜತೆಗೆ ರಸ್ತೆ ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿತ್ತು. ಬೇರೆಯವರ ಮನೆಯಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅದರ ಮೇಲೆ ಕಾಲಿಟ್ಟಿದ್ದಾಳೆ. ಹೀಗಾಗಿ ಕ್ಷಣಾರ್ಧದಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ. ಇದರ ವಿಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಜತೆಗೆ ವಿದ್ಯುತ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.