ನವದೆಹಲಿ: ವಿವಿಧ ಉದ್ಯೋಗ ಜಾಲತಾಣಗಳಲ್ಲಿ ಉದ್ಯೋಗ ಹಾಗೂ ಇಂಟರ್ನ್ಶಿಪ್ ಯೋಜನೆಗಳನ್ನು ನೀಡುತ್ತೇವೆ ಎಂದು ಜಾಹೀರಾತು ಪ್ರದರ್ಶಿಸಿ ವಂಚಿಸುವ ಏಜೆನ್ಸಿಗಳಿಗೆ ಸಿಬಿಐ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಏಜೆನ್ಸಿಗಳ ಮೂಲಕ ಯುವಕರು ಮೋಸ ಹೋಗುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ದಂಧೆಯನ್ನು ತಡೆಯುವುದಕ್ಕಾಗಿ ಸಿಬಿಐ ನಕಲಿ ಏಜೆನ್ಸಿಗಳಿಗೆ ವಾರ್ನಿಂಗ್ ಮಾಡಿದೆ. ಇದರ ಜೊತೆಗೆ ಉದ್ಯೋಗಾಕಾಂಕ್ಷಿಗಳು ಹಾಗೂ ಉನ್ನತ ವಿದ್ಯಾಭ್ಯಾಸದ ನಿರೀಕ್ಷೆಯಿಟ್ಟುಕೊಂಡ ಯುವಕರು ಇಂತಹ ಏಜೆನ್ಸಿಗಳ ಬಗ್ಗೆ ಜಾಗೃತರಾಗಿರಬೇಕೆಂದು ಸೂಚನೆ ನೀಡಿದೆ. ಹಿರಿಯ ಸಿಬಿಐ ಅಧಿಕಾರಿಗಳ ಹಾಗೆ ಯುವಕರನ್ನು ಮೋಸಗೊಳಿಸೋ ಯತ್ನ ಕೂಡಾ ನಡೆಯುತ್ತಿದೆ ಎಂದು ಎಚ್ಚರಿಕೆ ನೀಡಿದೆ.
ಕೆಲ ದಿನಗಳ ಹಿಂದೆ 'ಸಿಬಿಐ ಅಕಾಡೆಮಿ'' ಹಾಗೂ ಇಂಟರ್ನ್ ಶಾಲಾ.ಕಾಮ್ (Internshala.com) ಎಂಬ ಶೀರ್ಷಿಕೆಯ ವೆಬ್ ಸೈಟ್ಗಳಲ್ಲಿ 2020ನೇ ವರ್ಷದ ಇಂಟರ್ನ್ಶಿಪ್ ಆರಂಭಿಸುತ್ತಿದ್ದೇವೆ ಎಂದು ಜಾಹೀರಾತುಗಳನ್ನು ನೀಡಿದ್ದವು. ಈ ಜಾಹೀರಾತಿನಲ್ಲಿ ''ಸಿಬಿಐ ಇಂಟರ್ನ್ಶಿಪ್ ಆರಂಭಿಸಿದ್ದು ಇಂಟರ್ಶಿಪ್ ಮುಗಿದ ನಂತರ ಸಿಬಿಐ ಸಂಸ್ಥೆಯಲ್ಲಿ ಉದ್ಯೋಗ ನೀಡಲಾಗುತ್ತದೆ. ಸಿಬಿಐ ನಿಯಮಾವಳಿಗಳ ಪ್ರಕಾರ ವೇತನ ನೀಡಲಾಗುತ್ತದೆ'' ಎಂದು ಯುವಕರಿಗೆ ಆಮಿಷ ಒಡ್ಡಲಾಗಿತ್ತು. ಜೊತೆಗೆ ''ಆರರಿಂದ ಎಂಟು ವಾರಗಳವರೆಗಿನ ಇಂಟರ್ನ್ಶಿಪ್ನಲ್ಲಿ ಯಾವುದೇ ವೇತನ ನೀಡುವುದಿಲ್ಲ. ಇಂಟರ್ನ್ಶಿಪ್ಗೆ ಬರುವವರು ತಮ್ಮ ಪ್ರಯಾಣ ಹಾಗೂ ವಸತಿಯನ್ನು ತಾವೇ ನೋಡಿಕೊಳ್ಳಬೇಕು'' ಎಂದು ಸ್ಪಷ್ಟವಾಗಿ ಹೇಳಿತ್ತು.
ಇದನ್ನು ಗಮನಿಸಿದ ಸಿಬಿಐ '' ನಕಲಿ ಏಜೆನ್ಸಿಗಳಿಗೆ ಹಣ ನೀಡಿ ಮೋಸ ಹೋದರೆ ಸಿಬಿಐ ಜವಾಬ್ದಾರರಲ್ಲ, ಮೋಸ ಹೋಗುವ ಮುನ್ನ ಜಾಗ್ರತೆಯಿಂದಿರಿ'' ಎಂಬ ಎಚ್ಚರಿಕೆಯನ್ನು ಯುವಕರಿಗೆ ನೀಡಿದೆ. ಜೊತೆಗೆ ಮೋಸದ ಜಾಹೀರಾತು ನೀಡುವ ವೆಬ್ಸೈಟ್ಗಳ ಬಗ್ಗೆಯೂ ಪರಿಶೀಲಿಸಿ ಎಂದು ಸೂಚನೆ ನೀಡಿದೆ. ''ಕಾನೂನು, ಸೈಬರ್, ಡಾಟಾ ಅನಾಲಿಸಿಸ್, ಅಪರಾಧಶಾಸ್ತ್ರ, ಮ್ಯಾನೇಜ್ಮೆಂಟ್, ಡಿಜಿಟಲ್ ಫೋರೆನ್ಸಿಕ್ ಮುಂತಾದ ವಿಷಯಗಳಲ್ಲಿ ಇಂಟರ್ನ್ಶಿಪ್ ಒದಗಿಸುತ್ತೇವೆ ಎಂದು ಹೇಳಿ ವಂಚಿಸುವ ವೆಬ್ಸೈಟ್ಗಳಿಗೆ ಎಚ್ಚರಿಕೆ ನೀಡಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.