ಕಡಪ: ಅಪ್ಕೋ ಮಾಜಿ ಅಧ್ಯಕ್ಷನ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಅಪ್ಕೊದಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಂಗಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. ಹೀಗಾಗಿ ನಿನ್ನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಖಾಜಿಪೇಟ್ನಲ್ಲಿರುವ ಅಪ್ಕೋ ಮಾಜಿ ಅಧ್ಯಕ್ಷ (ರಾಜ್ಯ ಕೈಮಗ್ಗ ನೇಕಾರರ ಸಹಕಾರಿ ಸಂಘ) ಗುಜ್ಜಲ ಶ್ರೀನಿವಾಸಲು ಮನೆ ಮತ್ತು ಕಚೇರಿಗಳ ಮೇಲೆ ಸಿಬಿಐ ದಾಳಿ ಮಾಡಿತ್ತು.

ನಿನ್ನೆ ಸಂಜೆಯವರೆಗೆ ದಾಖಲೆ ಪರಿಶೀಲಿಸಿ 1 ಕೋಟಿ ರೂ. ನಗದು, 2 ಕೆಜಿ ಬೆಳ್ಳಿ, 3 ಕೆಜಿ ಬಂಗಾರ ಸೇರಿದಂತೆ ಆಸ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಏಕಕಾಲದಲ್ಲಿ ಗುಜ್ಜಲ ಶ್ರೀನಿವಾಸ್ ಮನೆ ಮತ್ತು ಕಚೇರಿಗಳ ಮೇಲೆ ರೇಡ್ ಕೈಗೊಳ್ಳಲಾಗಿತ್ತು. ತಮ್ಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಸಿಐಡಿ ಡಿಎಸ್ಪಿ ತಿಳಿಸಿದ್ದಾರೆ.

ತನಿಖೆಯ ಭಾಗವಾಗಿ ಅಧಿಕಾರಿಗಳು ತಿರುಪತಿ ಮತ್ತು ನೆಲ್ಲೂರಿನ ಪ್ರೊಡತೂರ್‌ನಲ್ಲಿ ತಪಾಸಣೆ ನಡೆಸಿದ್ದರು. ನೆಹರೂ ರಸ್ತೆಯಲ್ಲಿರುವ ಕೈಮಗ್ಗ ಸಹಕಾರ ಸಂಘದ ಅಕೌಂಟೆಂಟ್ ಆಗಿದ್ದ ಶ್ರೀರಾಮ್ ಎಂಬುವರ ಮನೆಯಲ್ಲಿ 200 ಗ್ರಾಂ ಚಿನ್ನ, 2 ಲಕ್ಷ ನಗದು ಮತ್ತು ಹಲವಾರು ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಗುಜ್ಜಲ ಶ್ರೀನಿವಾಸ್ ಅವರ ಪ್ರಮುಖ ಅನುಯಾಯಿ ರಾಘವೇಂದ್ರ ಮತ್ತು ಕೈಮಗ್ಗ ಸಮಾಜದ ಅಧ್ಯಕ್ಷ ಕೊಂಡಯ್ಯ ಎಂಬುವರ ಮನೆ ಮೇಲೆಯೂ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಆದರೆ ಕೊಂಡಯ್ಯ ಮನೆಯಲ್ಲಿ ಅಧಿಕಾರಿಗಳು ಯಾವುದೇ ವಸ್ತುಗಳು ಅಥವಾ ದಾಖಲೆಗಳನ್ನು ವಶಕ್ಕೆ ಪಡೆದಿಲ್ಲ.