ಪೂರ್ವ ಗೋದಾವರಿ: ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್ ಕಂಬ ಮುರಿದು ತಂತಿಗಳು ಕಾರಿನ ಮೇಲೆ ಬಿದ್ದಿದ್ದರಿಂದ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ ಇಬ್ಬರು ಸಜೀವ ದಹನವಾಗಿರುವ ಘಟನೆ ಜಗ್ಗಂಪೇಟ ತಾಲೂಕಿನ ಮಲ್ಲಿಸಾಲದಲ್ಲಿ ನಡೆದಿದೆ.
ಮೃತರು ವಿಶಾಖಪಟ್ಟಣಂ ನಿವಾಸಿಗಳೆಂದು ಗುರುತಿಸಲಾಗಿದೆ. ಬುಕ್ಕಾ ಸ್ಟ್ರೀಟ್ನ ವೀರ್ನಿ ಹನುಮಂತರಾವ್, ವಿಶಾಖಾ ಫಿಶಿಂಗ್ ಹಾರ್ಬರ್ ಮತ್ತು ದೇವಿಪಟ್ಟಣಂ ವಲಯದ ಫಜಿಲ್ಲಾಬಾದ್ನ ಮಟ್ಟಾ ಸತೀಶ್ ಮತ್ತು ಅವರ ಕುಟುಂಬ ಸದಸ್ಯರು ಗೋಕವರಂನಿಂದ ವಿಶಾಖಪಟ್ಟಣಂಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಮಲ್ಲಿಸಾಲ ಹೊರವಲಯದಲ್ಲಿ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕಂಬ ಮುರಿದು ವಿದ್ಯುತ್ ತಂತಿಗಳು ಕಾರಿನ ಮೇಲೆ ಬಿದ್ದಿದ್ದಾವೆ. ವಿದ್ಯುತ್ ತಂತಿಗಳು ಬಿದ್ದ ಪರಿಣಾಮ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದ್ರೆ ತೀವ್ರ ಗಾಯಗೊಂಡಿದ್ದ ಹನುಮಂತರಾವ್ ಮತ್ತು ಸತೀಶ್ ಕಾರಿನಿಂದ ಹೊರ ಬರಲು ಯತ್ನಿಸಿದ್ದರೂ ಸಹ ಬೆಂಕಿಯ ಕೆನ್ನಾಲಿಗೆ ಬಲಿಯಾಗಿದ್ದಾರೆ.
ಇನ್ನು ಕಾರಿನಲ್ಲಿದ್ದ ಇಬ್ಬರು ಮಹಿಳೆಯರಾದ ರಮಾದೇವಿ, ಭಾನು ಮತ್ತು ಆದಿತ್ಯ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದೆ. ಗಾಯಾಳುಗಳನ್ನು ಜಗ್ಗಂಪೆಟ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಜಗ್ಗಂಪೇಟ ಪೊಲೀಸರು ಘಟನಾಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.
ಈ ಘಟನೆ ಕುರಿತು ಜಗ್ಗಂಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.