ನವದೆಹಲಿ: ದೇಶದ ರಾಜಧಾನಿ ದೆಹಲಿ ಈಗ ಮನುಷ್ಯರಿಗೆ ಉಸಿರಾಡಲು ಕಷ್ಟಕರವಾಗುವ ಪರಿಸ್ಥಿತಿಗೆ ತಲುಪಿದೆ. ಚಳಿಗಾಲದಲ್ಲಿ ಅದ್ರಲ್ಲೂ ಮುಖ್ಯವಾಗಿ ದೀಪಾವಳಿಯ ನಂತರ ದೆಹಲಿ ಈ ರೀತಿ ತೀವ್ರಸ್ವರೂಪದ ವಾಯುಮಾಲಿನ್ಯಕ್ಕೆ ತುತ್ತಾಗುತ್ತಿತ್ತು. ಆದ್ರೆ, ಈ ಬಾರಿಯಂತೂ ಗಾಳಿಯ ಗುಣಮಟ್ಟ ಅತ್ಯಂತ ಕಲುಷಿತವಾಗಿದೆ.
ಆಗಸ್ಟ್, ಸೆಪ್ಟಂಬರ್ ತಿಂಗಳಲ್ಲಿ ಅನುಕೂಲಕರ ವಾತಾವರಣವಿದ್ದ ಕಾರಣ ವಾಯು ಗುಣಮಟ್ಟ ಸ್ಥಿರತೆ ಕಂಡಿತ್ತು. ಈ ಬಾರಿಯ ದೀಪಾವಳಿಯ ವೇಳೆ ಪಟಾಕಿಗಳ ಹೊಡೆತದಿಂದಾಗಿ ಉಂಟಾಗಿರುವ ಹೊಗೆ ಸಂಪೂರ್ಣವಾಗಿ ಉತ್ತರ ಭಾರತವನ್ನು ಆವರಿಸಿಬಿಟ್ಟಿದ್ದು, ದಿಲ್ಲಿಗೆ ಪ್ರತಿಬಾರಿಯಂತೆ ಈಗಲೂ ವಾಯುಬಾಧೆ ಎದುರಾಗಿದೆ. ಇದರಿಂದ 'ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿರುವ ಕೇಜ್ರಿವಾಲ್ ನೇತೃತ್ವದ ರಾಜ್ಯ ಸರ್ಕಾರ ನವೆಂಬರ್ 5ರಂದು ದಾಕಾ ಪಾಠಶಾಲೆಗಳಿಗೆ ರಜೆ ಘೋಷಿಸಿತ್ತು. ಸುತ್ತಮುತ್ತಲಿನ ರಾಜ್ಯಗಳಲ್ಲಿ ಮಳೆ ಸುರಿದು ಗಾಳಿಯ ಗುಣಮಟ್ಟ ತಹಬದಿಗೆ ಬರಲಿದೆ ಎಂದು ಅಧಿಕಾರಿಗಳು ಹೇಳ್ತಿದ್ರೂ ಹೇಳಿಕೆಗೆ ವಿರುದ್ಧವಾಗಿ ಪರಿಸ್ಥಿತಿ ಕೈಮೀರುತ್ತಿದೆ.
ಸಾಮಾನ್ಯವಾಗಿ ವಾಯು ಗುಣಮಟ್ಟ ಮಾಪಕದ ಪ್ರಕಾರ, 400-500 ಪಾಯಿಂಟ್ಗಳ ಮಧ್ಯೆ ಇದ್ದರೆ ಸಮಾಧಾನಕರ ಹಾಗೂ ಅದನ್ನೂ ಮೀರಿದರೆ 'ಅತ್ಯಂತ ಹಾನಿಕರ' ಎಂದು ಪರಿಗಣಿಸಲಾಗುತ್ತದೆ. ದೆಹಲಿಯಲ್ಲಿನ ಅನೇಕ ಕಡೆಗಳಲ್ಲಿ 500 ಪಾಯಿಂಟ್ಗಳನ್ನು ಮೀರಿದೆ. ದಟ್ಟವಾಗಿ ಹೊಗೆ ಆವರಿಸಿದ್ದು ಪರಿಣಾಮ ದೆಹಲಿಗೆ ಪ್ರಯಾಣಿಸುವ ಅನೇಕ ವಿಮಾನಗಳನ್ನು ರದ್ದು ಮಾಡಲಾಗಿದೆ. ಜನರು ಮುಖಕ್ಕೆ ಮುಖಗವಸು ಇಲ್ಲದೇ ಹೊರ ಬರಲಾಗದ ಸ್ಥಿತಿ ದೆಹಲಿಯಲ್ಲದೇ ಪಕ್ಕದ ಗುರುಗ್ರಾಮ, ಘಾಜಿಯಾಬಾದ್, ಫರಿದಾಬಾದ್, ನೋಯ್ಡಾ ಪ್ರದೇಶಗಳನ್ನು ಆವರಿಸಿದೆ. ಈ ವಿಷ ವಾಯುವಿನ ಪ್ರಭಾವಕ್ಕೆ ಒಳಗಾಗುವ ರಾಜ್ಯಗಳಲ್ಲಿ ಮಹಾರಾಷ್ಟ್ರ, ಮಧ್ಯ ಪ್ರದೇಶ, ಚತ್ತಿಸ್‌ಗಢ, ತೆಲಂಗಾಣ, ಒಡಿಶಾ ಇರುವುದು ವಾಯುಗಂಡಾಂತರ ಹಬ್ಬಿರುವ ವ್ಯಾಪ್ತಿಯನ್ನು ತೋರಿಸುತ್ತಿದೆ.
ಉತ್ತರ ಭಾರತದಲ್ಲಿ ಬೆಳೆಯಿಂದ ವ್ಯರ್ಥವಾಗುವ ಟನ್‌ಗಟ್ಟಲೆ ತ್ಯಾಜ್ಯಗಳನ್ನು ಹೊಲಗಳಲ್ಲೇ ಬಿಟ್ಟು ಸುಡಲಾಗುತ್ತದೆ. ಬೆಳೆಗಳ ತ್ಯಾಜ್ಯಗಳನ್ನು ಈ ರೀತಿಯಾಗಿ ಸುಡುವುದನ್ನು ನಿಲ್ಲಿಸುವಂತೆ 4 ವರ್ಷದ ಹಿಂದೆಯೇ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಆದೇಶಿಸಿತ್ತು. ಒಂದು ಟನ್ ತ್ಯಾಜ್ಯಗಳ ದಹನದಿಂದ 60ಕೆಜಿ ಕಾರ್ಬನ್ ಮೋನಾಕ್ಸೈಡ್, 3ಕೆಜಿ ಸೂಕ್ಷ್ಮ ಧೂಳಿನ ಜೊತೆಗೆ ಸಲ್ಫರ್ ಡಯಾಕ್ಸೈಡ್ ಹೊರಬರುತ್ತವೆ. ದೇಶದಲ್ಲಿ ಪ್ರತೀ ವರ್ಷ 10 ಟನ್ಗಳಷ್ಟು ಬೆಳೆ ವ್ಯರ್ಥಗಳನ್ನು ಸುಡಲಾಗುತ್ತಿದ್ದು ಇದ್ರಲ್ಲಿ ಶೇ50ರಷ್ಟು ಭಾಗ ಪಂಜಾಬ್, ಹರಿಯಾಣ ಉತ್ತರ ಪ್ರದೇಶದಲ್ಲೇ ನಡೆಯುತ್ತಿದೆ.
ವಾಯುಮಾಲಿನ್ಯದ ಭೀತಿ ದೆಹಲಿ ಅಥವಾ ಸುತ್ತಮುತ್ತಲ ಕೆಲ ಪ್ರದೇಶಗಳಿಗೆ ಸೀಮಿತವಾಗಿಲ್ಲ. ದೇಶದಲ್ಲಿ ಪ್ರತಿ ವರ್ಷ ಮೂರನೇ ಎರಡರಷ್ಟು ಮಾಲಿನ್ಯ ಹೆಚ್ಚಳವಾಗುತ್ತಿದೆ. ಸಮೀಕ್ಷೆಯೊಂದರ ಪ್ರಕಾರ, 180 ದೇಶಗಳಲ್ಲಿ ಭಾರತ ಕೊನೆಯ ಸ್ಥಾನದಲ್ಲಿದ್ದು, ದೇಶಾದ್ಯಂತ ಸರಾಸರಿ 8 ಮಂದಿಯಲ್ಲಿ ಒಬ್ಬ ವಾಯುಮಾಲಿನ್ಯದಿಂದ ಸಾವನ್ನಪ್ಪುತ್ತಿದ್ದಾನೆ. ಇನ್ನು ಇತ್ತೀಚೆಗೆ ಕೈಗಾರಿಕಾ ಮಾಲಿನ್ಯದ ವಿರುದ್ಧ ಚೀನಾದಲ್ಲಿ ಕಠಿಣ ಕ್ರಮ ಕೈಗೊಂಡಿರುವ ಕಾರಣ ಸಾವುನೋವು ಕಡಿಮೆಯಾಗುತ್ತಿವೆ.
ಆದರೆ ಭಾರತದಲ್ಲಿ ವಾಯುಮಾಲಿನ್ಯದಿಂದ ಉಂಟಾಗುವ ಸಾವಿನ ಸಂಖ್ಯೆಯಲ್ಲಿ ಶೇಕಡಾ 23 ರಷ್ಟು ಹೆಚ್ಚಳವಾಗಿದೆ. ಆಲ್ ಇಂಡಿಯಾ ಇನ್ಸ್‌ಸ್ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ಸಹ ಇದರ ಬಗ್ಗೆ ವರದಿ ನೀಡಿದ್ದು, ಪ್ರತಿ ವರ್ಷ ಹೆಚ್ಚಾಗುತ್ತಿರುವ ವಾಯುಮಾಲಿನ್ಯದಿಂದಾಗಿ ಜನರಲ್ಲಿ ಹೃದಯ ಮತ್ತು ಶ್ವಾಸಕೋಶದ ಕಾಯಿಲೆ ಹೆಚ್ಚಾಗುತ್ತಿದೆ ಎಂದು ತಿಳಿಸಿದೆ. ಚಿಕಾಗೊ ವಿಶ್ವವಿದ್ಯಾಲಯ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ, ವಿಷಕಾರಿ ವಾತಾವರಣವು ನಾಗರಿಕರ ಜೀವಿತಾವಧಿಯನ್ನು 7 ವರ್ಷಗಳವರೆಗೆ ಕಡಿಮೆ ಮಾಡುತ್ತದೆ ಎಂದು ಎಚ್ಚರಿಸಿದೆ.