ನವದೆಹಲಿ: ಬಿಎಸ್ಎನ್ಎಲ್ ಸಂಬಳ ಸಮಸ್ಯೆ ತಾರಕಕ್ಕೇರಿದೆ. ಈ ನಡುವೆ ತಿಂಗಳ ಪಗಾರ ಸಿಗದೆ ಕಣ್ಣೀರಿಟ್ಟ ಸಂಸ್ಥೆಯ ಮಹಿಳಾ ಸಿಬ್ಬಂದಿಯೊಬ್ಬರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಿಂಗಳ ಸಂಬಳವನ್ನೇ ನಂಬಿ ಬದುಕುವವರು ನಾವು, ಪಗಾರ ಸಿಗದಿದ್ದರೆ ಆ ತಿಂಗಳು ನಮ್ಮ ಬದುಕು ಎಷ್ಟು ಕಷ್ಟ ಎಂಬುದು ಸರ್ಕಾರಕ್ಕೆ ಎಲ್ಲಿ ಅರ್ಥವಾಗಬೇಕು? ನಿಜ ಹೇಳಬೇಕೆಂದರೆ ಈ ತಿಂಗಳ ದಿನಸಿಗೂ ಕಾಸಿಲ್ಲ, ಸರ್ಕಾರಿ ಕೆಲಸದಲ್ಲಿದ್ದರೂ ಊಟಕ್ಕೂ ಗತಿಯಿಲ್ಲದ ಸ್ಥಿತಿ ತಲುಪಿದ್ದೇವೆ ಎಂದು ಮಹಿಳೆ ಕಣ್ಣಿರಿಟ್ಟಿದ್ದಾರೆ.
ಸಂಬಳ ಕೊಡಿ ಎಂದು ಕೋರಿ ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ಭೇಟಿಯಾಗಿ ಮಾತನಾಡಿದ್ದೆವು ಆದ್ರೂ, ಸಂಬಳ ಸಿಕ್ಕಿಲ್ಲ. ಈಗ ನಮ್ಮ ಪಾಡು ಯಾರಿಗೂ ಬೇಡ. ಮನೆಯಲ್ಲಿ ಇಬ್ಬರು ಮಕ್ಕಳಿದ್ದಾರೆ, ಅವರ ವ್ಯಾನ್ ಫೀಸ್, ದಿನದ ಖರ್ಚು ಯಾರು ಕೊಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಸಂಸ್ಥೆಯ ದೊಡ್ಡ ಅಧಿಕಾರಿಗಳಿಗೆ ಮಾತ್ರ ಸಂಬಳ ನಿಲ್ಲಿಸಿಲ್ಲ ತಿಂಗಳಿಗೆ 60-80 ಸಾವಿರ ಸಂಬಳ ತೆಗೆದುಕೊಳ್ಳುವ ಅವರಿಗೆ ಅಲೋಯನ್ಸ್ಗಳೂ ಇವೆ. 20 ಸಾವಿರ ರೂ. ನಂಬಿ ಬದುಕುವ ನಾವು ಎಲ್ಲಿಗೆ ಹೋಗಬೇಕು ಎಂದು ವಿಡಿಯೊದಲ್ಲಿ ಮಹಿಳೆ ಕಣ್ಣೀರಾಗಿದ್ದಾರೆ.