ಮೊರಾದಾಬಾದ್, (ಯುಪಿ) : ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪ ಮೇಲೆ ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ.
ಉತ್ತರಪ್ರದೇಶದ ಎಸ್ಪಿ-ಬಿಎಸ್ಪಿ ಮೈತ್ರಿ ಮತ್ತು ಬಿಜೆಪಿ ಮಧ್ಯೆ ಗೆಲ್ಲೋದಕ್ಕೆ ತೀವ್ರ ಪೈಪೋಟಿಯಿದೆ. ಇದರ ಮಧ್ಯೆ ಅಲ್ಲಲ್ಲಿ ಕೆಲ ಗಲಾಟೆಗಳೂ ನಡೆದ ವರದಿಯಾಗಿದೆ. ಮೊರಾದಾಬಾದ್‌ನ ಬೂತ್ ನಂಬರ್ 231ರಲ್ಲಿ ಚುನಾವಣಾ ಕರ್ತವ್ಯದಲ್ಲಿ ಸಿಬ್ಬಂದಿಯೊಬ್ಬ ಮತದಾರರಿಗೆ ಸೈಕಲ್ ಗುರುತಿಗೆ ಮತ ಚಲಾಯಿಸುವಂತೆ ಒತ್ತಾಯಿಸುತ್ತಿದ್ದರು ಎಂಬ ಆರೋಪ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಲು ಚುನಾವಣಾ ಕರ್ತವ್ಯದಲ್ಲಿ ಸಿಬ್ಬಂದಿ ಮುಂದಾಗಿದ್ದ. ಆದರೆ, ಸ್ಥಳದಲ್ಲಿದ್ದ ಬಿಜೆಪಿ ಉದ್ರಿಕ್ತ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಪರಿಸ್ಥಿತಿ ಅರಿತು ಹಲ್ಲೆಗೊಳಗಾದ ಸಿಬ್ಬಂದಿಯನ್ನ ಮತಗಟ್ಟೆಯಿಂದ ಹೊರಗೆ ಕರೆ ತಂದರು. ಬಳಿಕ ಬಿಜೆಪಿ ಕಾರ್ಯಕರ್ತರನ್ನ ಪೊಲೀಸರು ಹೊರ ಕಳುಹಿಸಿದರು.
ಮತ್ತೊಂದೆಡೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಟಿಎಂಸಿ ಕಾರ್ಯಕರ್ತರ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿದೆ. ಇಲ್ಲಿನ ದೋಮಕಲ್ ನಗರದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಕಚ್ಚಾ ಬಾಂಬ್ ಎಸೆದ ಪರಿಣಾಮವಾಗಿ ಟಿಎಂಸಿ ಕಾರ್ಯಕರ್ತರು ಗಾಯಗೊಂಡಿದ್ದಾರೆ. ಕೂಡಲೇ ಗಾಯಾಳುಗಳನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.