ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ದೆಹಲಿಯಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆಯ ಬಗ್ಗೆ ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಭಾನುವಾರ ಆರೋಪಿಸಿದೆ.
ಗೌರವಾನ್ವಿತ ದೆಹಲಿ ಹೈಕೋರ್ಟ್ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ಕೆಲವು ವಿರೋಧ ಪಕ್ಷದ ನಾಯಕರು ನಡೆಸುತ್ತಿರುವ ಕೊಳಕು ರಾಜಕೀಯವನ್ನು ಕೊನೆಗೊಳಿಸಿದೆ ಎಂಬುದು ನನಗೆ ಖುಷಿ ತಂದಿದೆ. ದೆಹಲಿ ಸರ್ಕಾರವು ಪ್ರತಿ ದಿನ ಕೊರೊನಾಗೆ ಸಂಬಂಧಿಸಿದ ಸರಿಯಾದ ಅಂಕಿ-ಅಂಶಗಳನ್ನು ಜನರಿಗೆ ಒದಗಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಕೊರೊನಾ ಸಾವಿನ ಅಂಕಿ-ಅಂಶಗಳಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರದ ವಿರುದ್ಧ ಬಿಜೆಪಿ ಆಧಾರ ರಹಿತ ಆರೋಪಗಳನ್ನು ಮಾಡುವ ಮೂಲಕ ಇಷ್ಟು ದೊಡ್ಡ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿಯೂ ಕೀಳುಮಟ್ಟದ ರಾಜಕೀಯವನ್ನು ಮಾಡುತ್ತಿದೆ ಎಂದು ಎಎಪಿ ವಕ್ತಾರ ರಾಘವ್ ಚಾಧಾ ದೂರಿದ್ದಾರೆ.
ಹೈಕೋರ್ಟ್ ತೀರ್ಪು ಬಿಜೆಪಿಯ ಮುಖದ ಮೇಲೆ ಬಿಗಿಯಾದ ಹೊಡೆತ ಎಂದು ನಾನು ಭಾವಿಸುತ್ತೇನೆ. ಇಡೀ ವಿಶ್ವವೇ ಜನರ ಸೇವೆಗಾಗಿ ಒಗ್ಗೂಡಿದಾಗ ಇಂತಹ ಆಧಾರ ರಹಿತ ಮತ್ತು ದುರುದ್ದೇಶಪೂರಿತ ಟೀಕೆಗಳನ್ನು ಮಾಡಿದ್ದಕ್ಕಾಗಿ ಬಿಜೆಪಿ ದೆಹಲಿ ಜನರು ಮತ್ತು ದೆಹಲಿ ಸರ್ಕಾರದ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.