ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 70ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಭಾರತೀಯ ಜನತಾ ಪಕ್ಷ (ಬಿಜೆಪಿ) "ನೋ ನಮೋ (Know Namo)" ರಸಪ್ರಶ್ನೆ ಮತ್ತು ಪ್ರಧಾನಮಂತ್ರಿಯವರ ಸ್ಪೂರ್ತಿದಾಯಕ ಜೀವನ ಪಯಣ ಮತ್ತು ಅವರ ಸಾಧನೆಗಳ ಕುರಿತು ವರ್ಚುವಲ್ ಪ್ರದರ್ಶನವನ್ನು ನಮೋ ಆ್ಯಪ್ ಮೂಲಕ ಆಯೋಜಿಸಿದೆ.
ಬಿಜೆಪಿ "ನೋ ನಮೋ (Know Namo)" ರಸಪ್ರಶ್ನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದು, ಸ್ಪರ್ಧೆಯ ವಿಜೇತರು ಪ್ರಧಾನಮಂತ್ರಿಯವರು ಆಟೋಗ್ರಾಫ್ ಮಾಡಿದ ಪುಸ್ತಕಗಳನ್ನು ಪಡೆಯುತ್ತಾರೆ. ಇಂದು ಪ್ರಾರಂಭವಾಗುವ ರಸಪ್ರಶ್ನೆಯಲ್ಲಿ ಪಿಎಂ ಮೋದಿ ಮತ್ತು ಬಿಜೆಪಿಯ ಕುರಿತು ಪ್ರಶ್ನೆಗಳಿವೆ.
ಪ್ರಧಾನಿಗೆ ಶುಭಾಶಯ ಕೋರಲು ಹಾಗೂ ಧನ್ಯವಾದ ಹೇಳಲು ಬಯಸುವವರು ಸಂದೇಶಗಳ ಮೂಲಕ ಅಥವಾ ಅಪ್ಲಿಕೇಶನ್‌ನಲ್ಲಿ ವೀಡಿಯೊ ಅಪ್‌ಲೋಡ್ ಮಾಡಲು ನಮೋ ಆ್ಯಪ್ ಬಳಸಬಹುದು ಎಂದು ಪಕ್ಷ ತಿಳಿಸಿದೆ.
ಆ್ಯಪ್ ಬಳಕೆದಾರರು ಪ್ರಧಾನ ಮಂತ್ರಿಯ ಜೀವನಾಧಾರಿತ 360 ಡಿಗ್ರಿ ವರ್ಚುವಲ್ ಪ್ರದರ್ಶನವನ್ನು ಆನಂದಿಸಬಹುದು ಎಂದು ಪಕ್ಷ ಹೇಳಿದೆ. 'ಗ್ಲಿಂಪ್ಸಸ್ ಆಫ್ ನಮೋಸ್ ಇನ್ಸ್ಪೈರಿಂಗ್ ಲೈಫ್' ಶೀರ್ಷಿಕೆಯ ಪ್ರದರ್ಶನವು ನರೇಂದ್ರ ಮೋದಿಯವರ ಜೀವನ ಪ್ರಯಾಣವನ್ನು ಪ್ರದರ್ಶಿಸುತ್ತದೆ.
ಪ್ರಧಾನಿ ಮೋದಿ ಜನ್ಮದಿನ ಹಿನ್ನೆಲೆ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಒಂದು ವಾರದವರೆಗೆ 'ಸೇವಾ ಸಪ್ತಾಹ'ವನ್ನು ಆಯೋಜಿಸಿದ್ದು, ಇದರಲ್ಲಿ ಸ್ವಚ್ಛತೆ, ಸ್ಯಾನಿಟರಿ ಪ್ಯಾಡ್ ವಿತರಣೆ, ಗಾಲಿಕುರ್ಚಿಗಳ ವಿತರಣೆ ಮತ್ತು ಸಾಮಾಜಿಕ ಸೇವೆಗ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 14ರಿಂದ 20ರವರೆಗೆ ದೇಶಾದ್ಯಂತ ಆಯೋಜಿಸಲಾಗುತ್ತಿದೆ.