ಪಾಟ್ನಾ: ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಕೌತುಕು ಹೆಚ್ಚುತ್ತಿದೆ. ಚುನಾವಣೆಗಾಗಿ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಪಕ್ಷಗಳು, ಅಭಿವೃದ್ಧಿ, ಕೊರೊನಾ ನಿರ್ವಹಣೆ, ಪ್ರವಾಹ, ಉದ್ಯೋಗ ಮತ್ತು ಇತರೆ ವಿಚಾರಗಳನ್ನಿಟ್ಟುಕೊಂಡು ಆರೋಪ ಪ್ರತ್ಯಾರೋಗಳ ಸುರಿಮಳೆಗೈಯುತ್ತಿವೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಇತ್ತೀಚೆಗೆ ಬಿಹಾರದ ನಿವಾಸಿಗಳಿಗೆ ರಾಜ್ಯದ ಸರ್ಕಾರಿ ಉದ್ಯೋಗದಲ್ಲಿ ಶೇ.90 ರಷ್ಟು ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಉತ್ತರ ಬಿಹಾರದಲ್ಲಿ ಉಂಟಾಗಿದ್ದ ಪ್ರವಾಹ ಮತ್ತು ಕೋವಿಡ್ ನಿರ್ವಹಣೆ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರನ್ನು ಲೋಕ ಶಕ್ತಿ ಜನ್ ಪಾರ್ಟಿ(ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ತರಾಟೆಗೆ ತೆಗೆದುಕೊಂಡಿದ್ದರು.
ಬಿಹಾರದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಹೆಚ್ಚು ಕಳಂಕಿತ ಶಾಸಕರನ್ನು ಹೊಂದಿದೆ ಎಂಬ ಪಟ್ಟಿ ಬಿಡುಗಡೆ ಮಾಡಿದೆ. ಕಾಂಗ್ರೆಸ್, ಬಿಜೆಪಿ ಶಾಸಕರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಶೇಕಡಾ 41 ರಷ್ಟು ಆರ್‌ಜೆಡಿ ಶಾಸಕರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಕಾಂಗ್ರೆಸನಲ್ಲಿ ಶೇ.40, ಜೆಡಿಯುನಲ್ಲಿ ಶೇ.37 ಹಾಗೂ ಬಿಜೆಪಿಯ 35 ರಷ್ಟು ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಎಡಿಆರ್ ವರದಿ ಮಾಡಿದೆ.
11 ಶಾಸಕರು ಹತ್ಯೆ ಆರೋಪ ಎದುರಿಸುತ್ತಿದ್ದಾರೆ. 30 ಜನಪ್ರತಿನಿಧಿಗಳು ಹತ್ಯೆಗೆ ಯತ್ನ ಹಾಗೂ ಐವರು ಶಾಸಕರು ಮಹಿಳೆಯ ಸಂಬಂಧಿತ ಪ್ರಕರಣಗಳು ಹಾಗೂ ಓರ್ವ ಎಂಎಲ್‌ಎ ಅತ್ಯಾಚಾರ ಆರೋಪ ಪ್ರಕರಣವನ್ನು ಎದುರಿಸುತ್ತಿದ್ದಾರೆ.
ವರದಿ ಪ್ರಕಾರ ಶೇಕಡಾ 67 ರಷ್ಟು ಮಂದಿ ಶಾಸಕರು ಕೋಟ್ಯಾಧಿಪತಿಗಳಾಗಿದ್ದರೆ. ಜೆಡಿಯುನ ಖಾಗಾರಿಯಾ ಕ್ಷೇತ್ರದ ಪೂನಂ ದೇವಿ ಅತಿ ಶ್ರೀಮಂತ ಶಾಸಕಿಯಾಗಿದ್ದಾರೆ. ಇವರ ಒಟ್ಟು ಆಸ್ತಿ 41 ಕೋಟಿ. ಕಾಂಗ್ರೆಸ್ ಭಾಗಲ್‌ಪುರ್ ಎಂಎಲ್‌ಎ 40 ಕೋಟಿ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಒಟ್ಟು 240 ಶಾಸಕರ ಪೈಕಿ 134 ಮಂದಿ ಉನ್ನತ ವ್ಯಾಸಂಗ, 96 ಮಂದಿ ಪದವಿ ಹಾಗೂ ಅದಕ್ಕಿಂತ ಕಡಿಮೆ ಶಿಕ್ಷಣ ಪಡೆದಿದ್ದಾರೆ ಎಂದು ವರದಿ ಹೇಳಿದೆ.