ಭೂಪಾಲ್, ಮಧ್ಯಪ್ರದೇಶ: ಈಗ ಎಲ್ಲೆಡೆ ವಾಯುಮಾಲಿನ್ಯದ್ದೇ ಸುದ್ದಿ. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ವಾಯುಮಾಲಿನ್ಯ ಸಾಕಷ್ಟು ಅವಾಂತರಗಳನ್ನು ಸೃಷ್ಟಿ ಮಾಡಿದೆ. ತದನಂತರ ಹಲವಾರು ರಾಜ್ಯಗಳಿಗೆ ಹಂತ ಹಂತವಾಗಿ ವ್ಯಾಪಿಸುತ್ತಿರುವ ಮಾಲಿನ್ಯ ಒಂದೊಂದೇ ರಾಜ್ಯಗಳನ್ನು ಹೈರಾಣಾಗಿಸುತ್ತಿದೆ. ಸದ್ಯಕ್ಕೆ ದೆಹಲಿಯಲ್ಲಿ ವಾಯುಗುಣಮಟ್ಟ ಸ್ವಲ್ಪ ಚೇತರಿಕೆ ಕಂಡರೆ, ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ವಾಯುಗುಣಮಟ್ಟ ಇಳಿಕೆಯಾಗಿ ಆತಂಕ ಸೃಷ್ಟಿಮಾಡಿದೆ.
ವಾಯುಮಾಲಿನ್ಯ ಮಧ್ಯಪ್ರದೇಶದಲ್ಲಿ ಆತಂಕ ಸೃಷ್ಟಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹೊಗೆಯ ಸಾಂದ್ರತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿಂದೆ ದೆಹಲಿ ಹಾಗೂ ಪಂಜಾಬ್ನಲ್ಲಿ ಇದೇ ರೀತಿಯ ಗಂಭೀರ ವಾತಾವರಣ ಸೃಷ್ಟಿಯಾಗಿತ್ತು. ಇಂದು ಬೆಳಗ್ಗೆ 5.30ಕ್ಕೆ ಮಧ್ಯಪ್ರದೇಶದಲ್ಲಿ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ. ಗಾಳಿಯ ಗುಣಮಟ್ಟ ತೀವ್ರ ಇಳಿಮುಖ ಕಂಡಿದೆ. ಚಂಡಿಗಢ, ರಾಜಸ್ತಾನ, ಉತ್ತರ ಪ್ರದೇಶದ ಪೂರ್ವ ಭಾಗ, ಮಧ್ಯಪ್ರದೇಶದ ಪೂರ್ವ ಭಾಗಗಳಲ್ಲಿ ಗಾಳಿ ಮಧ್ಯಮ ಗುಣಮಟ್ಟದಲ್ಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ಹೇಳಿದೆ.
ವಾಯುಮಾಲಿನ್ಯದಿಂದಾಗಿ ಉಷ್ಣತೆಯಲ್ಲೂ ಕೂಡಾ ಏರುಪೇರಾಗಿದೆ. ಮಧ್ಯಪ್ರದೇಶದ ಭೂಪಾಲ್ನಲ್ಲಿ 14.4 ಡಿಗ್ರಿ ಸೆಲ್ಸಿಯಸ್, ಗ್ವಾಲಿಯರ್ನಲ್ಲಿ 11 ಡಿಗ್ರಿ ಸೆಲ್ಸಿಯಸ್ ಹಾಗೂ ಜಬಲ್ಪುರದಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ. ಹರಿಯಾಣದ ಉಷ್ಣಾಂಶದಲ್ಲಿ ಸ್ವಲ್ಪ ಹೆಚ್ಚಳ ಕಂಡಿದೆ. ಅಂಬಾಲಾದಲ್ಲಿ 8.6 ಹಾಗೂ ಹಿಸಾರ್ನಲ್ಲಿ 6.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಉತ್ತರ ಪ್ರದೇಶದ ಭರೈಖ್ನಲ್ಲಿ 14.6 ಡಿಗ್ರಿ ಸೆಲ್ಸಿಯಸ್ಗೆ ಉಷ್ಣಾಂಶ ಏರಿಕೆಯಾಗಿದೆ. ಲಖ್ನೋದಲ್ಲಿ 14.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದೆ.
ಈ ಹವಾಮಾನ ವೈಪರಿತ್ಯ ಹಾಗೂ ವಾಯುಮಾಲಿನ್ಯದ ಕಾರಣದಿಂದ ಸುಮಾರು 19 ರೈಲುಗಳು ತಮ್ಮ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಂಡಿವೆ. ಇದರ ಪರಿಣಾಮ ಎಲ್ಲ ರಾಜ್ಯಗಳ ರೈಲುಗಳ ಮೇಲೆಯೂ ಬೀರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ವಾಯುಮಾಲಿನ್ಯದಿಂದ ಈಗಾಗಲೇ ಉತ್ತರ ಭಾರತದ ರಾಜ್ಯಗಳು ದುಷ್ಪರಿಣಾಮಗಳನ್ನು ಎದುರಿಸುತ್ತಿವೆ. ಇದೆಲ್ಲ ದಕ್ಷಿಣ ಭಾರತದ ರಾಜ್ಯಗಳಿಗೂ ಕೂಡಾ ಎಚ್ಚರಿಕೆಯ ಗಂಟೆಯಾಗಿದೆ. ಇಲ್ಲೂ ಕೂಡಾ ಹವಾಮಾನ ವೈಪರೀತ್ಯದ ಕಾರಣದಿಂದ ಉತ್ತರ ಭಾರತದ ಪರಿಸ್ಥಿತಿಯೇ ಏರ್ಪಟ್ಟರೆ ಆಶ್ಚರ್ಯದ ಸಂಗತಿಯಲ್ಲ. ಆದ್ದರಿಂದ ದಕ್ಷಿಣ ಭಾರತದ ರಾಜ್ಯಗಳು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಹೀಗಾಗದಂತೆ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ.