ಹೈದರಾಬಾದ್: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಭಾರತದಲ್ಲೂ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಅದರಲ್ಲಿ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಮುಂದಿದೆ. ಈಗಾಗಲೇ 1 ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿ ಪೂರೈಸಿರುವ ಲಸಿಕೆ ಇದೀಗ ಮೂರನೇ ಹಂತದ ಪ್ರಯೋಗ ಆರಂಭಿಸಿದೆ.
ದೇಶೀಯವಾಗಿ ಈ ಲಸಿಕೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡುವಂತೆ ಸಿಡಿಎಸ್ಸಿಒ ತಜ್ಞರು ಶಿಫಾರಸು ಮಾಡಿದ್ದರು. ಮೂರನೇ ಹಂತದಲ್ಲಿ 25,000 ಮಂದಿಯನ್ನ ಪ್ರಯೋಗಕ್ಕೊಳಪಡಿಸಲು ನಿರ್ಧರಿಸಲಾಗಿದ್ದು, ದೆಹಲಿ, ಮುಂಬೈ, ಲಖನೌ ಸೇರಿದಂತೆ 19 ಕಡೆಗಳಲ್ಲಿ ಪ್ರಯೋಗ ನಡೆಯಲಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ಭಾರತ್ ಬಯೋಟೆಕ್‌ಗೆ ಇದೀಗ ಅನುಮತಿ ನೀಡಿದ್ದು, ಭಾರತದಾದ್ಯಂತ 25 ಕ್ಕೂ ಹೆಚ್ಚು ಕೇಂದ್ರಗಳಲ್ಲಿ 3ನೇ ಹಂತದ ಪ್ರಯೋಗ ಪ್ರಾರಂಭಗೊಂಡಿದೆ. ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ತಜ್ಞರ ಸಮಿತಿ ಕೆಲವು ಷರತ್ತುಗಳೊಂದಿಗೆ 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಲು ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ. ಕೋವ್ಯಾಕ್ಸಿನ್ ಎಂಬ ಲಸಿಕೆಯನ್ನ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸುಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿದೆ.
ಅಕ್ಟೋಬರ್ 2ರಂದು 3ನೇ ಹಂತದ ಪ್ರಯೋಗಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿಕೊಂಡಿತ್ತು. ಆದರೆ, ಈ ವೇಳೆ ಸುರಕ್ಷತೆ ಮತ್ತು ಪ್ರತಿರೋಧ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಂಪೂರ್ಣ ದತ್ತಾಂಶ ನೀಡುವಂತೆ ಸೂಚನೆ ನೀಡಲಾಗಿತ್ತು. 18 ವರ್ಷ ಮೇಲ್ಪಟ್ಟ 28,500 ವ್ಯಕ್ತಿಗಳ ಮೇಲೆ ದೆಹಲಿ, ಮುಂಬೈ, ಪಾಟ್ನಾ ಮತ್ತು ಲಖನೌ ಸೇರಿದಂತೆ 10 ರಾಜ್ಯದ 19 ತಾಣಗಳಲ್ಲಿ ಪ್ರಯೋಗ ನಡೆಯಲಿದೆ.