ನವದೆಹಲಿ: ಅಯೋಧ್ಯೆ ವಿವಾದದ ವಿಚಾರಣೆಯನ್ನು ನೇರ ಪ್ರಸಾರ ಮಾಡಲು ಕೆ.ಎನ್ ಗೋವಿಂದಾಚಾರ್ಯ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸುದೀರ್ಘ ಪತ್ರ ಬರೆದಿದ್ದರು. ಈ ಸಂಬಂಧ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ತ್ರಿ ಸದಸ್ಯಪೀಠ ಈ ಸಂಬಂಧ ಸುಪ್ರೀಂಕೋರ್ಟ್ ರಿಜಿಸ್ಟ್ರಿಯ ಪ್ರತಿಕ್ರಿಯ ಕೇಳಿದೆ.
ಹಿರಿಯ ವಕೀಲ ವಿಕಾಸ್ ಸಿಂಗ್ ಅರ್ಜಿದಾರರ ಕೆ .ಎನ್ ಗೋವಿಂದಾಚಾರ್ಯ ಅವರ ಪರವಾಗಿ ಕೋರ್ಟ್ಗೆ ಹಾಜರಾಗಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ, ಎಸ್ಎ ಬೊಬ್ಡೆ, ಎಸ್ ನಜೀರ್ ಅಬ್ದುಲ್ ಪೀಠದ ಎದುರು ತಮ್ಮ ವಾದ ಮಂಡನೆ ಮಾಡಿದರು. ಸದ್ಯ ಅಯೋಧ್ಯಾ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ವಿಚಾರಣೆ ಪ್ರಕ್ರಿಯೆಗಳನ್ನ ಬಹಳಷ್ಟು ಜನರಿಗೆ ನೇರವಾಗಿ ಭಾಗವಹಿಸಲು ಆಗುವುದಿಲ್ಲ ಎಂದರು.
ಹಲವು ಜನರಿಗೆ ಕೋರ್ಟ್ ರೂಮ್ಗೆ ಎಂಟ್ರಿ ಕೊಡಲೂ ಸಹ ಅನುಮತಿ ಇರುವುದಿಲ್ಲ. ಹೀಗಾಗಿ ಘನ ನ್ಯಾಯಾಲಯ ಪ್ರಕರಣದ ತೀವ್ರತೆ ಹಾಗೂ ಇದು ರಾಷ್ಟ್ರದ ಬಹುಸಂಖ್ಯಾತರ ಗಮನ ಸೆಳೆದಿರುವ ಪ್ರಕರಣ ಆಗಿರುವ ಹಿನ್ನೆಲೆಯಲ್ಲಿ ಒಪನ್ ಕೋರ್ಟ್ ವಿಚಾರಣೆ( ತೆರೆದ) ನಡೆಸಬೇಕು ಎಂದು ವಾದ ಮಂಡನೆ ಮಾಡಿದರು.
ಒಂದೊಮ್ಮೆ ಲೈವ್ ಸ್ಟ್ರೀಮಿಂಗ್ (ನೇರ ಪ್ರಸಾರ) ಸಾಧ್ಯವಾಗದಿದ್ದರೆ, ವಿಚಾರಣೆ ಆರಂಭವಾಗುತ್ತಿದ್ದಂತೆ ರೆಕಾರ್ಡಿಂಗ್ ಅನ್ನಾದರೂ ಮಾಡಿ ಎಂದು ಪೀಠದ ಮುಂದೆ ಮನವಿ ಮಾಡಿದರು. ವಿಕಾಸ್ ಸಿಂಗ್ ಮನವಿ ಆಲಿಸಿದ ಮೂವರು ಸದಸ್ಯರ ಪೀಠ, ಈ ಸಂಬಂಧ ರಿಜಿಸ್ಟ್ರಿಯಿಂದ ವರದಿ ಕೇಳುವುದಾಗಿ ಹೇಳಿತು. ಅದರ ಪ್ರತಿಕ್ರಿಯೆ ಪಡೆಯಲು ತೀರ್ಮಾನಿಸಿತು.
ಆರ್ಎಸ್ಎಸ್ನ ಮಾಜಿ ಪ್ರಚಾರಕ ಹಾಗೂ ಚಿಂತಕ ಕೆ ಎನ್ ಗೋವಿಂದಾಚಾರ್ಯ ಈ ಬಗ್ಗೆ ಕಳೆದ ತಿಂಗಳು ಸುಪ್ರೀಂಕೋರ್ಟ್ಗೆ ಫಿಟಿಷನ್ ಒಂದನ್ನು ಸಲ್ಲಿಸಿ ವಿಚಾರಣೆಯ ನೇರ ಪ್ರಸಾರಕ್ಕೆ ಮನವಿ ಮಾಡಿದ್ದರು. ಈ ಸಂಬಂಧ ಗೋವಿಂದಾಚಾರ್ಯ ಸಿಜೆಐಗೆ ಪತ್ರವನ್ನೂ ಬರೆದಿದ್ದರು.