ಗಾಂಧಿನಗರ: ಗುಜರಾತ್ ಮಹಿಳೆಯರಿಗೆ ಸುರಕ್ಷಿತವಾದ ರಾಜ್ಯವೆಂದು ಘೋಷಿಸಲ್ಪಟ್ಟಿದೆ. ಆದ್ರೆ 2018 ಮತ್ತು 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳನ್ನು ನೋಡಿದ್ರೆ, ನಿಜವಾಗ್ಲೂ ರಾಜ್ಯ ಮಹಿಳೆಯರಿಗೆ ಸೇಫ್ ಆಗಿದೆಯೇ ಎಂಬ ಪ್ರಶ್ನೆ ಮೂಡದೆ ಇರದು.
2018 ಮತ್ತು 2019ರಲ್ಲಿ ಗುಜರಾತ್ನಲ್ಲಿ ಒಟ್ಟು 2,723 ಅತ್ಯಾಚಾರ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅರ್ಥಾತ್ ದಿನಕ್ಕೆ ಕನಿಷ್ಠ ಅಂದ್ರೆ ಮೂರು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ ಎಂದು ತಿಳಿದುಬಂದಿದೆ.
ವಿಧಾನಸಭೆ ಕಲಾಪದ ವೇಳೆ ಕಾಂಗ್ರೆಸ್ ಶಾಸಕರು ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಕುರಿತು ಕೇಳಿದ ಪ್ರಶ್ನೆಗೆ, ಉತ್ತರಿಸಿದ ಗೃಹ ಸಚಿವ ಪ್ರದೀಪ್ ಸಿಂಗ್ ಜಡೇಜಾ ಅವರು 2018-19 ರಲ್ಲಿ ಒಟ್ಟು 2,723 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಸದನಕ್ಕೆ ಮಾಹಿತಿ ನೀಡಿದ್ರು.
ಅಹಮದಾಬಾದ್‌ನಲ್ಲಿ ಎರಡು ವರ್ಷಗಳಲ್ಲಿ 540, ಸೂರತ್ನಲ್ಲಿ 452 ಪ್ರಕರಣ, ರಾಜ್‌ಕೋಟ್ 158 ಮತ್ತು ಬನಸ್ಕಂತ ಜಿಲ್ಲೆಯಲ್ಲಿ 150 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬುಡಕಟ್ಟು ಜಿಲ್ಲೆಯಾದ ಡಾಂಗ್‌ನಲ್ಲಿ ಅತಿ ಕಡಿಮೆ ಪ್ರಕರಣಗಳು ವರದಿಯಾಗಿದ್ದು ಕಳೆದ ಎರಡು ವರ್ಷಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
"ಬೇಟಿ ಬಚಾವೊ ಬೇಟಿ ಪಡಾವೋ" ಎಂಬ ಘೋಷಣೆ ನೀಡಲು ಹೆಸರುವಾಸಿಯಾದ ರಾಜ್ಯದಲ್ಲೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಸಿಎಂ ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಸ್ವಲ್ಪವಾದ್ರು ಆರ್ಥಿಕ ನೆರವು ಸಿಗಬೇಕೆಂದು ದಾರಿಯಾಪುರದ ಕಾಂಗ್ರೆಸ್ ಶಾಸಕ ಗಯಾಸುದ್ದೀನ್ ಶೇಖ್ ವಿನಂತಿಸಿಕೊಂಡರು.