ಹೈದರಾಬಾದ್: ಕೋವಿಡ್-19 ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಪರಿಣಾಮ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇದರ ಪರಿಣಾಮ ಆನ್ಲೈನ್ನಲ್ಲಿ ಸ್ವ-ಕಲಿಕೆಯ ಪ್ರಮಾಣ ಏರಿಕೆಯಾಗಿದೆ.
ಯುನೆಸ್ಕೋದ ಅಂದಾಜಿನ ಪ್ರಕಾರ, ಈ ಸಾಂಕ್ರಾಮಿಕ ರೋಗದಿಂದಾಗಿ 165ಕ್ಕೂ ಹೆಚ್ಚು ದೇಶಗಳಲ್ಲಿ 150 ಕೋಟಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದಾರೆ.
ಚೀನಾದಲ್ಲಿ ಕೊರೊನಾ ವೈರಸ್ ಹರಡಿದಾಗ, ಅಲ್ಲಿಯ ಸರ್ಕಾರ ವಿದ್ಯಾರ್ಥಿಗಳಿಗೆ ಶಿಕ್ಷಣದಿಂದ ದೂರ ಉಳಿಯಬೇಡಿ ಎಂದು ಸೂಚಿಸಿತ್ತು. ವರದಿಗಳ ಪ್ರಕಾರ, ಚೀನಾದಲ್ಲಿ ಸುಮಾರು 26 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಆನ್‌ಲೈನ್ ಸ್ವಯಂ-ಕಲಿಗೆ ದಾಖಲಾಗಿದ್ದರು ಎಂದು ತಿಳಿದುಬಂದಿದೆ.
ಆದ್ರೆ, ಆನ್‌ಲೈನ್ ಶಿಕ್ಷಣ ಅಷ್ಟು ಸುಲಭವಲ್ಲ. ಜಗತ್ತಿನಾದ್ಯಂತ ಇದನ್ನು ಐಷಾರಾಮಿ ಶಿಕ್ಷಣವೆಂದು ಪರಿಗಣಿಸಲಾಗುತ್ತದೆ. ಆನ್‌ಲೈನ್ ಶಿಕ್ಷಣಕ್ಕೆ ಉತ್ತಮ ಗುಣಮಟ್ಟದ ಇಂಟರ್ನೆಟ್ ಮುಖ್ಯವಾಗಿದೆ. ಭಾರತದಂತಹ ಅಭಿವೃದ್ಧಿ ಹೋಂದುತ್ತಿರುವ ರಾಷ್ಟ್ರಗಳಲ್ಲಿ, ಬೃಹತ್ ಡಿಜಿಟಲ್ ವಿಭಜನೆ ಇದೆ ಎಂದು ಹೇಳಬಹುದು. ನಗರ ಪ್ರದೇಶಗಳು ಉತ್ತಮ ಗುಣಮಟ್ಟದ ಇಂಟರ್ನೆಟ್ ಹೊಂದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಇದು ಬಹಳ ಕಷ್ಟಕರವಾಗಿದೆ. ಒಟ್ಟಿನಲ್ಲಿ ಇ-ಲರ್ನಿಂಗ್ ಪ್ಲಾಟ್‌ಫಾರ್ಮ್‌ಗೆ ದೊಡ್ಡ ಮೊತ್ತದ ಡೇಟಾದ ಅವಶ್ಯಕತೆ ಇರುತ್ತದೆ.
ಪ್ರಸ್ತುತ ಪರಿಸ್ಥಿತಿಯು ಶಾಶ್ವತವಾಗಿ ಮುಂದುವರಿಯದಿದ್ದರೂ, ಜಗತ್ತು ಒಂದು ಸಂಯೋಜಿತ ಬೋಧನಾ ವಿಧಾನದತ್ತ ಸಾಗುವ ಹೆಚ್ಚಿನ ಸಾಧ್ಯತೆಯಿದೆ. ಅಲ್ಲಿ ಇ-ಕಲಿಕೆಯ ಸುಲಭತೆ ಮತ್ತು ಭೌತಿಕ ಮುಖಾಮುಖಿ ಶಿಕ್ಷಣದ ದಕ್ಷತೆಯು ಸಂಯೋಜಿತವಾಗಿದೆ.
ಆದ್ದರಿಂದ, ಅಭಿವೃದ್ಧಿ ಹೊಂದದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳು ತಮ್ಮ ಡಿಜಿಟಲ್ ಮೂಲಸೌಕರ್ಯವನ್ನು ಸುಧಾರಿಸುವತ್ತ ಸಮರ್ಥವಾದ ದಾಪುಗಾಲು ಹಾಕುವುದು ಕಡ್ಡಾಯವಾಗಿರುತ್ತದೆ.