ಕೊಹಿಮಾ (ನಾಗಾಲ್ಯಾಂಡ್): ಮೂರು ದಿನಗಳ ಈಶಾನ್ಯ ರಾಜ್ಯಗಳ ಪ್ರವಾಸದಲ್ಲಿರುವ ಸೇನಾ ಮುಖ್ಯಸ್ಥ ಮನೋಜ್ ನರವಾಣೆ ಕೊಹಿಮಾದಲ್ಲಿರುವ ಅನಾಥಾಶ್ರಮ ಮತ್ತು ನಿರಾಶ್ರಿತರ ಕೇಂದ್ರ (ಕೆಒಡಿಹೆಚ್)ಗೆ ಹೊಸ ಸೌಲಭ್ಯವನ್ನು ಉದ್ಘಾಟಿಸಿದ್ದಾರೆ.
ಅಸ್ಸಾಂ ರೈಫಲ್ಸ್ ಈ ಸೌಲಭ್ಯವನ್ನು ನೀಡುತ್ತಿದ್ದು, ಈ ಅನಾಥಾಶ್ರಮ ಮತ್ತು ನಿರಾಶ್ರಿತರ ಕೇಂದ್ರ ಪ್ರಸ್ತುತ 26 ಬಾಲಕಿಯರು ಸೇರಿದಂತೆ 95 ಮಕ್ಕಳನ್ನು ನೋಡಿಕೊಳ್ಳುತ್ತಿದೆ. ಇದರ ಜೊತೆಗೆ ಇಲ್ಲಿನ ಮಕ್ಕಳಿಗೆ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ
ಕೆಲವು ವರ್ಷಗಳಿಂದ ಅಸ್ಸಾಂ ರೈಫಲ್ಸ್ ಅನೇಕ ಸಾರ್ವಜನಿಕ ಕಾರ್ಯಗಳ ಮೂಲಕ ಸಾಮಾಜಿಕ ಸಂಸ್ಥೆಗಳಿಗೆ ಬೆನ್ನೆಲುಬಾಗಿ ನಿಂತುಕೊಂಡಿದ್ದು, ಸಮಾಜ ಸೇವೆಯನ್ನು ಮುಂದುವರೆಸುತ್ತಿದೆ.
ಈ ಮೊದಲು, ಅಸ್ಸಾಂ ರೈಫಲ್ ಮೂಲಕ ಸುಮಾರು 4.5 ಲಕ್ಷ ರೂಪಾಯಿಗಳ ಮೂಲಕ ಅನಾಥಾಶ್ರಮಕ್ಕೆ ಎರಡು ಟಾಯ್ಲೆಟ್ ಬ್ಲಾಕ್‌ಗಳ ನಿರ್ಮಿಸಿ ಮತ್ತು ಎರಡು ಕಂಪ್ಯೂಟರ್ ಮತ್ತು ಒಂದು ಟೆಲಿವಿಷನ್ ಒದಗಿಸಲಾಗಿತ್ತು.
ಕೊರೊನಾ ಸಮಯದಲ್ಲಿಯೂ ಕೂಡಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. 2020ರ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಪಡಿತರವನ್ನು ಕೂಡಾ ನೀಡಿದ್ದು, ವೈದ್ಯಕೀಯ ಶಿಬಿರವನ್ನು ಕೂಡಾ ಆಯೋಜನೆ ಮಾಡಲಾಗಿದೆ.
ಈಗ ಸ್ಥಾಪನೆ ಮಾಡಿರುವ ಕೊಹಿಮಾ ಅನಾಥಾಶ್ರಮ ಕೊಹಿಮಾ ಪಟ್ಟಣದಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿದೆ. ಈ ಅನಾಥಾಶ್ರಮ 1973ರಲ್ಲಿ ಸ್ಥಾಪನೆಯಾಗಿದ್ದು, ಶ್ರೀಮತಿ ಜಪುಟೋ ಅಂಗಾಮಿ ಸ್ಥಾಪನೆ ಮಾಡಿದ್ದು, ಅವರನ್ನು ಅಲ್ಲಿನ ಜನತೆ ಪ್ರೀತಿಯಿಂದ ಮದರ್ ಥೆರೇಸಾ ಎಂದೇ ಕರೆಯುತ್ತಿದ್ದರು.