ನವದೆಹಲಿ: ಚೀನಾದೊಂದಿಗಿನ 3,500 ಕಿ.ಮೀ.ವಾಸ್ತವ ಗಡಿಯಲ್ಲಿ(ಎಲ್‌ಎಸಿ) ನಿಯೋಜಿಸಲಾಗಿರುವ ಸಶಸ್ತ್ರ ಪಡೆಗಳಿಗೆ ಚೀನಾದ ಯಾವುದೇ ದುಷ್ಕೃತ್ಯಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನೆಯ ಉನ್ನತ ಅಧಿಕಾರಿಗಳೊಂದಿಗೆ ಪೂರ್ವ ಲಡಾಖ್‌ನ ಪರಿಸ್ಥಿತಿ ಕುರಿತು ನಡೆಸಿದ ಸಭೆ ಬಳಿಕ ಇಂತಾ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವನೆ, ನೌಕಾದಳದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯಾ ಭಾಗವಹಿಸಿದ್ದರು.
ಚೀನಾದ ಯಾವುದೇ ದುಷ್ಕೃತ್ಯಕ್ಕೆ ಸೂಕ್ತ ಉತ್ತರ ನೀಡಲು ಸಶಸ್ತ್ರ ಪಡೆಗಳು ಸಂಪೂರ್ಣ ಸಿದ್ಧರಾಗಿರುವಂತೆ ಸೂಚಿಸಲಾಗಿದ್ದು, ಗಡಿಯನ್ನು ಕಾಪಾಡಲು ಕಠಿಣ ವಿಧಾನವನ್ನು ಅನುಸರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಉಭಯ ದೇಶಗಳ ನಡುವಿನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಚೀನಾ ನಡೆಸುವ ಯಾವುದೇ ಆಕ್ರಮಣಕಾರಿ ಕೃತ್ಯವನ್ನು ಎದುರಿಸಲು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ವಾಯುಪಡೆ ಕೂಡಾ ಕಾರ್ಯಚರಣೆ ನಡೆಸಲು ಪೂರ್ವ ಲಡಾಖ್‌ನ ಆಯಕಟ್ಟಿನ ಜಾಗಗಳನ್ನು ಗುರುತಿಸಿದೆ ಎನ್ನಲಾಗಿದೆ.
ಭಾರತ, ಚೀನಾ ಸೇನೆ ಮುಖಾಮುಖಿಯಾದ ಸಂದರ್ಭದಲ್ಲಿ 1996 ಮತ್ತು 2005ರ ಒಪ್ಪಂದದ ಪ್ರಕಾರ ಶಸ್ತ್ರಾಸ್ತ್ರ ಬಳಸದಿರಲು ಎರಡು ಸೈನ್ಯಗಳು ಪರಸ್ಪರ ನಿರ್ಧರಿಸಿ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಆದರೆ ಇನ್ನುಮುಂದೆ ನಮ್ಮ ವಿಧಾನವು ವಿಭಿನ್ನವಾಗಿರುತ್ತದೆ. ಕಮಾಂಡರ್ಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮಿಲಿಟರಿ ಉನ್ನತ ಮೂಲಗಳು ತಿಳಿಸಿವೆ.