ನವದೆಹಲಿ: ಮಹಾಮಾರಿ ಕೊರೊನಾ ವಿಶ್ವದಾದ್ಯಂತ ಹಬ್ಬಿದ್ದು, ಭಾರತದಲ್ಲೂ ಸುಮಾರು 60ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಇಲ್ಲಿಯವರೆಗೆ ಇದಕ್ಕೆ ಯಾವುದೇ ರೀತಿಯ ಔಷಧ ಕಂಡು ಹಿಡಿದಿಲ್ಲ. ಆದರೆ ಜೈಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದಂಪತಿಗಳು ಕೊರೊನಾದಿಂದ ಗುಣಮುಕ್ತರಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಎಚ್ಐವಿ ಸೋಂಕು ನಿಯಂತ್ರಣ ಮಾಡಲು ವ್ಯಾಪಕವಾಗಿ ಬಳಕೆ ಮಾಡುವ ಔಷಧಗಳ ಸಂಯೋಜನೆ ಕೋವಿಡ್ಗೆ ಬಳಕೆ ಮಾಡಲಾಗಿದ್ದು, ಜೈಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಇಟಲಿ ದಂಪತಿ ಚೇತರಿಸಿಕೊಂಡಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಅನುಮೋದನೆ ಕೋರಿ ಕೊರೊನಾ ವೈರಸ್ ಪೀಡಿತರಿಗೆ ಹೆಚ್ಐವಿ ಔಷಧಗಳಾದ ಲೋಪಿನಾವಿರ್ ಹಾಗೂ ರಿಟೋನವಿರ್ ಔಷಧ ಸಂಯೋಜನೆ ಮಾಡಿ ಅವರಿಗೆ ನೀಡಲಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಎಸ್ಎಂಎಸ್ ಆಸ್ಪತರೆ ವೈದ್ಯಕೀಯ ಅಧೀಕ್ಷಕ ಡಾ.ಡಿಎಸ್ ಮೀನಾ, ಇಟಲಿಯ ವ್ಯಕ್ತಿ ಮತ್ತು ಅವರ ಪತ್ನಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಲೋಪಿನಾವಿರ್ ಮತ್ತು ರಿಟೋನವೀರ್ ಔಷಧ ನೀಡಿದ್ದು, ಇದಕ್ಕೆ ರೋಗಿಗಳಿಂದಲೂ ಒಪ್ಪಿಗೆ ಪಡೆದುಕೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ. ಔಷಧ ತೆಗೆದುಕೊಂಡಿರುವ ಅವರ ಸ್ಥಿತಿ ಸ್ಥಿರವಾಗಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕೊರೊನಾ ವೈರಸ್ಗೆ ಈಗಾಗಲೇ ಚೀನಾದ ಕ್ಲಿನಿಕಲ್ ಪ್ರಯೋಗಗಳಲ್ಲಿ ಲೋಪಿನಾವಿರ್ ಮತ್ತು ರಿಟೊನವಿರ್ ಔಷಧ ಬಳಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಇಟಲಿಯಿಂದ ಭಾರತಕ್ಕೆ ಬಂದಿದ್ದ ಈ ದಂಪತಿಗಳಲ್ಲಿ ಕೊರೊನಾ ವೈರಸ್ ಕಂಡು ಬಂದಿದ್ದ ಕಾರಣ ಚಿಕಿತ್ಸೆ ನೀಡಲಾಗುತ್ತಿತ್ತು.