ಅಮರಾವತಿ: ಕೋವಿಡ್ ಹಿನ್ನೆಲೆ ಮಾರ್ಚ್‌ನಿಂದ ಶಾಲಾ - ಕಾಲೇಜುಗಳನ್ನು ಮುಚ್ಚಲಾಗಿತ್ತು. ಇದೀಗ ಅಕ್ಟೋಬರ್ 15 ರಿಂದ ಕಾಲೇಜುಗಳನ್ನು ಪುನಃ ತೆರೆಯಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ.
ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಪರಿಶೀಲನಾ ಸಭೆ ನಡೆಸಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಅಭಿಪ್ರಾಯಗಳನ್ನು ಸಂಗ್ರಹಿಸಿ ಅ.15 ರಿಂದ ಕಾಲೇಜುಗಳನ್ನು ಪುನಾರಂಭಿಸುವ ಕುರಿತು ಮಾರ್ಗದರ್ಶಿಗಳನ್ನು ರೂಪಿಸಿದ್ದಾರೆ.
ದಾಖಲಾತಿ ಅನುಪಾತವನ್ನು ಶೇಕಡಾ 90ಕ್ಕೆ ಹೆಚ್ಚಿಸುವತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸಿಎಂ ನಿರ್ದೇಶನ ನೀಡಿದ್ದಾರೆ. ಅಲ್ಲದೇ ರಾಜ್ಯಾದ್ಯಂತ ಇರುವ ವಿಶ್ವವಿದ್ಯಾಲಯಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹಾಗೂ ವಿಜಯನಗರಂ ಮತ್ತು ಪ್ರಕಾಶಂ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಗ್ರೀನ್ ಸಿಗ್ನಲ್ ಸಹ ಕೊಟ್ಟಿದ್ದಾರೆ.
3 ಅಥವಾ 4 ವರ್ಷದ ಪದವಿ ಕೋರ್ಸ್ ತೆಗೆದುಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಹತ್ತು ತಿಂಗಳ ಅಪ್ರೆಂಟಿಸ್‌ಶಿಪ್ ಪಡೆಯಬೇಕು. ಅಪ್ರೆಂಟಿಸ್‌ಶಿಪ್ ಮುಗಿದ ನಂತರ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಕೋರ್ಸ್‌ಗಳನ್ನು ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.