ಅಮರಾವತಿ (ಆಂಧ್ರಪ್ರದೇಶ): ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಕೇವಲ 21 ದಿನಗಳಲ್ಲಿ ತನಿಖೆ ಮಾಡಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು ಎಂಬ ಕರಡು ಶಾಸನವನ್ನು ಆಂಧ್ರಪ್ರದೇಶ ಸಚಿವ ಸಂಪುಟ ಅನುಮೋದಿಸಿದೆ.
ಈ ಶಾಸನಕ್ಕೆ ಎಪಿ ದಿಶಾ ಆಕ್ಟ್ ಎಂದು ಹೆಸರಿಸಲಾಗಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಇದರಿಂದ ಎಚ್ಚೆತ್ತ ಆಂಧ್ರ ಸರ್ಕಾರ ಮಹಿಳೆಯ ರಕ್ಷಣೆಗೆ ಕಂಕಣಬದ್ದವಾಗಿದ್ದು, ಈ ಸಂಬಂಧ ಕರಡು ಶಾಸನವನ್ನು ಅನುಮೋದಿಸಿದೆ. ಇದಲ್ಲದೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಮಾಡಲು ಕೂಡ ಮುಂದಾಗಿದೆ.
ಈ ಎರಡು ಮಸೂದೆಗಳನ್ನು ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ನಿರೀಕ್ಷೆಯಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ ನೂತನ ಕಾನೂನಿಕ ಪ್ರಕಾರ, ಮಹಿಳೆಯ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದರೆ, ನೀಡಲಾಗುವ 21 ದಿನಗಳಲ್ಲಿ ಏಳು ದಿನಗಳಲ್ಲಿ ತನಿಖೆ, ನಂತರದ ದಿನಗಳಲ್ಲಿ ನ್ಯಾಯಾಲಯದ ವಿಚಾರಣೆಯನ್ನು ಮಾಡಲಾಗುವುದು. ಇದಾದ ಬಳಿಕ ಶಿಕ್ಷೆ ಪ್ರಕಟವಾಗುವಂತೆ ಈ ಬಿಲ್ನಲ್ಲಿ ಉಲ್ಲೇಖಿಸಲಾಗಿದೆ.