ಅಗ್ರಹಾರಂ(ತಂಜಾವೂರು): ಹೊಲದಲ್ಲಿ ಎತ್ತು ಮೇಯ್ದಿದ್ದರಿಂದ ಜಮೀನಿನ ಒಡೆಯ ಅದರ ಕಾಲು ಕತ್ತರಿಸಿರುವ ಅಮಾನವೀಯ ಘಟನೆ ತಂಜಾವೂರಿನ ಅಗ್ರಹಾರಂನಲ್ಲಿ ನಡೆದಿದೆ.
ಆನಂದ್ ದನ ಸಾಕುವ ವ್ಯಕ್ತಿಯಾಗಿದ್ದು, ತಂಜಾವೂರಿನ ಅಗ್ರಹಾರಂನಲ್ಲಿ ವಾಸವಾಗಿದ್ದಾನೆ. ನಿನ್ನೆ ಎತ್ತು ಹೊಡೆದುಕೊಂಡು ಹೋಗಿದ್ದ ವೇಳೆ ಬೇರೆ ವ್ಯಕ್ತಿಯ ಹೊಲದಲ್ಲಿ ಬೆಳೆ ಮೇಯಿಸಿದ್ದಾನೆ ಎನ್ನಲಾಗಿದೆ. ಇದನ್ನ ನೋಡಿದ ಜಮೀನಿನ ಒಡೆಯ ಕಾಮರಾಜ್ ಮಾನವೀಯತೆ ಮರೆತು ಕುಡುಗೋಲಿನಿಂದ ಎತ್ತಿನ ಕಾಲು ಕತ್ತರಿಸಿದ್ದಾನೆ.
ಘಟನೆಯಿಂದ ಎತ್ತಿನ ಕಾಲಿನ ಮೂಳೆ ತೀವ್ರವಾಗಿ ಹಾನಿಗೊಂಡಿದ್ದು, ಎದ್ದು ನಡೆಯಲು ಸಾಧ್ಯವಾಗದೇ ಹೊಲದಲ್ಲಿ ಮಲಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಆನಂದ್ ಸ್ಥಳಕ್ಕಾಗಮಿಸಿದ್ದು, ಆಘಾತಕ್ಕೊಳಗಾಗಿದ್ದಾನೆ. ಎತ್ತಿನ ಪರೀಕ್ಷೆ ಮಾಡಿರುವ ಪಶುವೈದ್ಯರು, ಕಾಲಿನ ಮೂಳೆ ತೀವ್ರವಾಗಿ ಹಾನಿಗೊಂಡಿರುವ ಕಾರಣ ಗುಣಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನಾಡುಕ್ಕವೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಇಲ್ಲಿಯವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಆದರೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಹೊಲದ ಮಾಲೀಕನನ್ನು ಬಂಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.