ಸ್ವಚ್ಛ ಇಂಧನದ ತಲೆಮಾರಿಗೆ ಆದ್ಯತೆ ಕೊಡುವುದು ಹಾಗೂ 2030ರ ಹೊತ್ತಿಗೆ ತೈಲ ಆಮದನ್ನು ಶೇಕಡಾ 10ರಷ್ಟು ತಗ್ಗಿಸುವ ಮೂಲಕ ಪರಿಸರವನ್ನು ಶ್ರೀಮಂತಗೊಳಿಸಲು ನಿರ್ಧರಿಸಿರುವ ಕೇಂದ್ರ ಸರಕಾರಕ್ಕೆ ಇಲ್ಲಿ ಒಂದು ಸಿಹಿ ಸುದ್ದಿ ಇದೆ. ದೇಶದಲ್ಲಿರುವ ಪ್ರಮುಖ ಜಲಾಶಯಗಳ ಮೇಲ್ಮೈಯನ್ನು ಬಳಸಿಕೊಳ್ಳುವ ಮೂಲಕ ನಾವು ಏನಿಲ್ಲವೆಂದರೂ 280 ಗಿಗಾ ವ್ಯಾಟ್ (ಒಂದು ಗಿಗಾ ವ್ಯಾಟ್ ಎಂದರೆ ಒಂದು ಸಾವಿರ ಮೆಗಾ ವ್ಯಾಟ್‌ಗೆ ಸಮ) ಸೌರ ವಿದ್ಯುತ್ತನ್ನು ಉತ್ಪಾದಿಸಲು ಸಾಧ್ಯ ಎಂದು ಹೊಸ ಸಂಶೋಧನೆಯೊಂದರ ವರದಿಗಳು ಬಹಿರಂಗಪಡಿಸಿವೆ. ಭಾರತದಲ್ಲಿರುವ ಜಲಾಶಯಗಳ ಮೇಲ್ಮೈ 18,000 ಚದರ ಕಿಮೀ ವ್ಯಾಪ್ತಿ ಹೊಂದಿದ್ದು, ಇದು ಅಕ್ಷರಶಃ ಸೌರ ಶಕ್ತಿಯ ಗಣಿಯಾಗಿದೆ ಎಂದು ವಿದ್ಯುತ್ ಪ್ರಸರಣ ಆಯೋಗದ (ಎನರ್ಜಿ ಟ್ರಾನ್ಸ್‌ಮಿಶನ್ ಕಮೀಶನ್ ಇಟಿಸಿ) ಅವಿಭಾಜ್ಯ ಅಂಗವಾಗಿರುವ ವಿದ್ಯುತ್ ಸಂಪನ್ಮೂಲಗಳ ಆಯೋಗ ಅಂದಾಜಿಸಿದೆ.
2022ರ ವೇಳೆಗೆ 100ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದ ಭಾರತ ಆ ಹೊತ್ತಿಗಾಗಲೇ 175 ಗಿಗಾ ವ್ಯಾಟ್ ಉತ್ಪಾದಿಸುವತ್ತ ದಾಪುಗಾಲಿಟ್ಟು ಸಾಗಿದೆ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಇಂಟರ್‌ನ್ಯಾಷನಲ್ ಲೇಬರ್ ಆರ್ಗನೈಜೇಶನ್) ಒಂಬತ್ತು ತಿಂಗಳ ಹಿಂದಷ್ಟೇ ದೇಶಕ್ಕೆ ಅಭಿನಂದನೆ ಸಲ್ಲಿಸಿತ್ತು. ಒಂದು ವೇಳೆ ಜಲಾಶಯಗಳ ಮೇಲ್ಮೈಯಲ್ಲಿ ಸೌರ ವಿದ್ಯುತ್ ಉತ್ಪಾದಿಸುವುದು ಸಾಕಾರವಾಗಿದ್ದೇ ಆದಲ್ಲಿ ಭವಿಷ್ಯದಲ್ಲಿ ಇನ್ನೂ ಹೆಚ್ಚೆಚ್ಚು ಪವಾಡಗಳು ಸಂಭವಿಸುವ ಭರವಸೆಗಳು ಉಜ್ವಲವಾಗಿವೆ.
ಕಲ್ಲೆಣ್ಣೆಯನ್ನು ಬಳಸುವುದರ ಮೂಲಕ ಪರಿಸರವನ್ನು ನಾಶ ಮಾಡಿಕೊಂಡಿರುವ ಹಲವಾರು ದೇಶಗಳು ಅನೇಕ ವರ್ಷಗಳಿಂದ ಪರ್ಯಾಯ ಇಂಧನ ಮೂಲಗಳ ಹುಡುಕಾಟದಲ್ಲಿವೆ. ನವೀಕರಿಸಬಹುದಾದ ಇಂಧನದ ಕ್ಷಮತೆ ಹೆಚ್ಚಿಸುವ ಪ್ರಕ್ರಿಯೆಯಲ್ಲಿ, ಕ್ಯಾಲಿಫೋರ್ನಿಯಾದಲ್ಲಿ ದಶಕಗಳ ಹಿಂದೆಯೇ ತೇಲುವ (ಫ್ಲೊಟೊ ವೊಲ್ಟಾಯಿಕ್) ಸೌರ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಕ್ರಮೇಣ ಅದು ಇತರ ದೇಶಗಳಿಗೂ ಹರಡಿತು. ವಿಶ್ವ ಬ್ಯಾಂಕ್ ಇತ್ತೀಚೆಗೆ ಮಾಡಲಾದ ಅಂದಾಜಿನ ಪ್ರಕಾರ, ಅಮೆರಿಕದ ಒಟ್ಟು ವಿದ್ಯುತ್ ಉತ್ಪಾದನೆಯ ಶೇಕಡಾ 10ರಷ್ಟು ವಿದ್ಯುತ್ ಅದರ ಜಲಾಶಯಗಳ ಮೇಲ್ಮೈಯಿಂದ ಉತ್ಪತ್ತಿಯಾಗುತ್ತದೆ. ಈ ಹಿಂದೆ ಮಾಡಲಾದ ಅಂದಾಜಿನ ಪ್ರಕಾರ, ಜಗತ್ತಿನಾದ್ಯಂತ ಈ ರೀತಿ ಉತ್ಪಾದನೆಯಾಗುವ ಸೌರ ವಿದ್ಯುತ್ ಪ್ರಮಾಣ 400 ಗಿಗಾ ವ್ಯಾಟ್ ತಲುಪಬಹುದು. ಈ ಪ್ರಮಾಣದಲ್ಲಿ ಅರ್ಧದಷ್ಟು ಸೌರ ವಿದ್ಯುತ್ ಭಾರತದ ಜಲಾಶಯಗಳ ಮೇಲ್ಮೈ ಬಳಕೆಯಿಂದ ಉತ್ಪತ್ತಿಯಾಗಬಹುದು ಎಂಬುದನ್ನು ವಿವಿಧ ಅಧ್ಯಯನದ ವರದಿಗಳು ತೋರಿಸಿಕೊಟ್ಟಿರುವುದು ಹಲವಾರು ಅವಕಾಶಗಳು ಹಾಗೂ ಸಾಧ್ಯತೆಗಳನ್ನು ಹುಟ್ಟುಹಾಕಿದೆ.
ಮಾಳಿಗೆ ಮೇಲೆ ಸೌರ ವಿದ್ಯುತ್ ಉತ್ಪಾದಿಸುವಲ್ಲಿ ಸಕ್ರಿಯವಾಗಿರುವ ಅಖಂಡ ಹೈದರಾಬಾದ್‌ನ ಯಶೋಗಾಥೆಗಳು ಪರ್ಯಾಯ ಇಂಧನ ಮೂಲಗಳ ಕುರಿತು ಜನರಲ್ಲಿ ಹೊಸ ಜಾಗೃತಿಯನ್ನು ಹುಟ್ಟುಹಾಕಿವೆ. ಮನೆಗಳು, ಬಹುಮಹಡಿ ಸಂಕೀರ್ಣಗಳು ಹಾಗೂ ವಠಾರಗಳ ಮೇಲೆ ಸ್ಥಾಪಿಸುವಂತಹ ಸೌರ ಫಲಕಗಳ ಬೆಲೆಗಳು ಹಾಗೂ ರಿಯಾಯಿತಿಗಳ ವಿವರಗಳನ್ನು ಕೇಂದ್ರ ಸರಕಾರ ಇತ್ತೀಚೆಗಷ್ಟೇ ಅಂತಿಮಗೊಳಿಸಿದೆ. ವಿಶ್ವವಿದ್ಯಾಲಯಗಳು, ಸರಕಾರಿ ಆಸ್ಪತ್ರೆಗಳು ಮತ್ತು ರೈಲ್ವೆ ಇಲಾಖೆಗಳಲ್ಲಿ ಇಂತಹ ಸೌರ ವಿದ್ಯುತ್ ಉತ್ಪಾದನೆ ಕುರಿತ ಯಶೋಗಾಥೆಗಳ ಕುರಿತು ನಾವು ಆಗಾಗ ಕೇಳುತ್ತಲೇ ಇದ್ದೇವೆ. ಗುಜರಾತ್‌ನ ವಡೋದರಾದಲ್ಲಿ ಐದು ವರ್ಷಗಳ ಹಿಂದೆ ನೀರಿನ ಕಾಲುವೆ ಮೇಲೆ ೧೦ ಮೆಗಾ ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಫಲಕಗಳನ್ನು ನಿರ್ಮಿಸಿದ ಸುದ್ದಿ ಸಂಚಲನ ಮೂಡಿಸಿತ್ತು. ಸಾಮಾನ್ಯವಾಗಿ ಇಂತಹ ಸಾಮರ್ಥ್ಯದ ಘಟಕಗಳನ್ನು ಭೂಮಿಯ ಮೇಲೆ ಸ್ಥಾಪಿಸಬೇಕೆಂದರೆ, ಕನಿಷ್ಠ 50,000 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ನೀರಿನ ಕಾಲುವೆಗಳ ಮೇಲೆ ಇಂತಹ ಘಟಕಗಳನ್ನು ನಿರ್ಮಿಸುವುದರಿಂದ ಎರಡು ರೀತಿಯ ಅನುಕೂಲಗಳಿವೆ ಭೂಸ್ವಾಧೀನ ಸಮಸ್ಯೆ ಇಲ್ಲದಿರುವುದು ಹಾಗೂ ನೀರು ಆವಿಯಾಗುವುದನ್ನು ನಿಯಂತ್ರಿಸುವುದು.
ಜರ್ಮನಿಯಂತಹ ದೇಶಗಳಲ್ಲಿ, ಇಂತಹ ಯೋಜನೆಗಳ ಅನುಷ್ಠಾನ ವೆಚ್ಚ ಶೇಕಡಾ 10-15ರಷ್ಟು ಹೆಚ್ಚಾಗುತ್ತದೆ. ಆದರೆ, ದೀರ್ಘಕಾಲೀನ ಲಾಭಗಳಿಗೆ ಹೋಲಿಸಿದರೆ, ಈ ಅಲ್ಪ ಪ್ರಮಾಣದ ಏರಿಕೆ ನಗಣ್ಯ ಎಂಬುದು ತಜ್ಞರ ಅಭಿಪ್ರಾಯ. ವಿಶಾಖಪಟ್ಟಣದ ಮುದ್ರಾ ಸರೋವರ ಮತ್ತು ಮೇಘಾದ್ರಿಗಡ ಜಲಾಶಯಗಳ ಮೇಲೆ ಸ್ಥಾಪಿಸಲಾಗಿರುವ ತೇಲು ಸೌರ ವಿದ್ಯುತ್ ಯೋಜನೆಗಳಲ್ಲಿ ಬಳಸಲಾಗಿದ್ದ ಕಬ್ಬಿಣಕ್ಕೆ ಪರ್ಯಾಯವಾಗಿ ಅಲ್ಯುಮಿನಿಯಂ ಲೋಹವನ್ನು ಬಳಸಿದ್ದರಿಂದ ಉತ್ತಮ ಫಲಿತಾಂಶಗಳು ದಕ್ಕಿವೆ. ಜರ್ಮನ್ ತಂತ್ರಜ್ಞಾನ ಆಧರಿತ ಸೌರ ಫಲಕಗಳನ್ನು ಇಲ್ಲಿ ಅಳವಡಿಸಲಾಗಿದ್ದು, ನೀರಿನ ಮಟ್ಟ ಹೆಚ್ಚಾಗಲಿ, ಕಡಿಮೆಯಾಗಲಿ, ಯಾವುದೇ ಸಮಸ್ಯೆಗಳು ಬಾರದಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನಾದ್ಯಂತ 120 ದೇಶಗಳ ವಿದ್ಯುತ್ ಅವಶ್ಯಕತೆ ಈಡೇರಿಸುವಂತಹ ಐಎಸ್‌ಎ ಅನ್ನು (ಇಂಟರ್‌ನ್ಯಾಶನಲ್ ಸೋಲಾರ್ ಕೊಯಾಲಿಶನ್ ಅಂತಾರಾಷ್ಟ್ರೀಯ ಸೌರ ಒಕ್ಕೂಟ) ನಾಲ್ಕು ವರ್ಷಗಳ ಹಿಂದೆ ಉದ್ಘಾಟಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಒಂದು ವೇಳೆ ಈ ಸಂಘಟನೆಯ ಸೇವೆಗಳು ಮತ್ತು ಜಲಾಶಯಗಳ ಮೇಲ್ಮೈನಲ್ಲಿ ಈಗಾಗಲೇ ಸೌರ ವಿದ್ಯುತ್ ಉತ್ಪಾದಿಸುತ್ತಿರುವ ದೇಶಗಳ ಅನುಭವಗಳನ್ನು ಬಳಸಿಕೊಂಡಿದ್ದೇ ಆದಲ್ಲಿ, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಮುಂಚೂಣಿ ಸ್ಥಾನ ಪಡೆದುಕೊಳ್ಳುವುದು ಖಂಡಿತ. ಈ ನಿಟ್ಟಿನಲ್ಲಿ ಲೋಪರಹಿತ ಯೋಜನೆಗಳು ಮತ್ತು ಸಾಂಸ್ಥಿಕ ಮೂಲಸೌಕರ್ಯಗಳನ್ನು ಹೊಂದುವ ಪ್ರಯತ್ನ ಪ್ರಾರಂಭಿಸಲು ಇದು ಸಕಾಲವಾಗಿದೆ.
ಸೌರ ವಿದ್ಯುತ್ ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುತ್ತಿರುವ ಚೀನಾ ದೇಶ, ಯುನಾನ್ ನಗರದ ಸಮೀಪ, ಕುಸಿದಿರುವ ಕಲ್ಲಿದ್ದಲು ಗಣಿಯಲ್ಲಿ ಕೃತಕ ಸರೋವರವೊಂದನ್ನು ನಿರ್ಮಿಸಿದ್ದು, ಒಟ್ಟು 66 ಲಕ್ಷ ಫಲಕಗಳ ಮೂಲಕ 40 ಮೆಗಾ ವ್ಯಾಟ್ ವಿದ್ಯುತ್ ಉತ್ಪತ್ತಿ ಮಾಡುತ್ತಿದೆ. ಇನ್ನು, 60ಕ್ಕೂ ಹೆಚ್ಚು ಜಲಾಶಯಗಳ ಮೇಲೆ ಸೌರ ವಿದ್ಯುತ್ ಘಟಕಗಳನ್ನು ನಿರ್ಮಿಸುವ ಮೂಲಕ ವಿಶಿಷ್ಟ ಸಾಧನೆ ಮಾಡಿದ ಕೀರ್ತಿ ಜಪಾನ್ ದೇಶದ್ದು. ಇಂಡೋನೇಷ್ಯ, ಚಿಲಿ, ತೈವಾನ್ ಮತ್ತು ನ್ಯೂಝಿಲೆಂಡ್‌ನಂತಹ ದೇಶಗಳು ಸೌರ ವಿದ್ಯುತ್ ಸ್ಥಾವರಗಳ ಹೊಸ ತಾಣಗಳಾಗಿ ಬೆಳೆಯುತ್ತಿವೆ.
ಈ ಎಲ್ಲ ದೇಶಗಳಿಗೆ ಹೋಲಿಸಿದರೆ, ಭಾರತಕ್ಕೆ ಸಹಜ ಲಾಭಗಳು ಹೆಚ್ಚಿವೆ. ಭೌಗೋಳಿಕವಾಗಿ ನಮಗೆ ಸಕಾರಾತ್ಮಕ ಅನುಕೂಲಗಳಿವೆ. ಭೂಗೋಳದ ಮಕರ ಸಂಕ್ರಾಂತಿ ವಲಯ ಹಾಗೂ ಕರ್ಕಾಟಕ ಸಂಕ್ರಾಂತಿ ವೃತ್ತದ ಮಧ್ಯಭಾಗದಲ್ಲಿ ವರ್ಷದ ೩೦೦ ದಿನಗಳ ಕಾಲ ಸೂರ್ಯ ಬೆಳಕು ಸೂಸುತ್ತಿರುತ್ತಾನೆ. ಈ ಪ್ರದೇಶದಲ್ಲಿ ಬರುವ ದೇಶಗಳ ಪೈಕಿ ಭಾರತವೂ ಒಂದು. ಇದು ನಿಜಕ್ಕೂ ಬೇಡದೇ ಬಂದ ವರ. ಕಲ್ಲಿದ್ದಲು ಮತ್ತು ನೈಸರ್ಗಿಕ ಅನಿಲ ನಿಕ್ಷೇಪಗಳಂತೂ ಸದಾ ಇದ್ದೇ ಇವೆ. ಒಂದು ವೇಳೆ ಈ ನಿಕ್ಷೇಪಗಳು ಖಾಲಿಯಾದ ಪಕ್ಷದಲ್ಲಿ, ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುತ್ತದೆ. ಆದರೆ, ಸೂರ್ಯನ ಬೆಳಕು ಹಾಗಲ್ಲ, ಅದು ಎಂದಿಗೂ ಮುಗಿಯದ ಸಂಪತ್ತು.
ಕೃಷಿ ಭೂಮಿಯಲ್ಲಿ ಸೌರ ಫಲಕಗಳನ್ನು ಅಳವಡಿಸುವ ಮೂಲಕ ವಿದ್ಯುತ್ ಉತ್ಪಾದಿಸಬಹುದು ಎಂಬುದು ಈಗಾಗಲೇ ಸಾಬೀತಾಗಿರುವ ಸಂಗತಿ. ಆದರೆ, ಜಲಾಶಯಗಳ ಮೇಲ್ಮೈ ಮೇಲೆ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವುದರಿಂದ ಹಲವಾರು ಮರಗಳು ಕೊಡಲಿ ಏಟಿನಿಂದ ಪಾರಾಗುತ್ತವೆ. ನೀರಿನ ಮೇಲ್ಮೈಯಲ್ಲಿ ಸೌರ ಫಲಕಗಳನ್ನು ಅಳವಡಿಸುವುದರಿಂದ, ನೀರನ್ನು ಶುದ್ಧೀಕರಿಸಬೇಕಾದ ವೆಚ್ಚವನ್ನೂ ಉಳಿಸಿದಂತಾಗುತ್ತದೆ. ಇಂಧನ ಸಂಪನ್ಮೂಲ ಏಜೆನ್ಸಿಯ (ಎನರ್ಜಿ ರಿಸೋರ್ಸಸ್ ಏಜೆನ್ಸಿ) ಇತ್ತೀಚಿನ ವರದಿಯೂ ಈ ವಾಸ್ತವವನ್ನು ದೃಢಪಡಿಸಿದೆ.
ಜರ್ಮನಿ ದೇಶವಂತೂ ತನ್ನ ಒಟ್ಟು ಬೇಡಿಕೆಯ ಶೇಕಡಾ 85ರಷ್ಟು ವಿದ್ಯುತ್ತನ್ನು ಸೌರ ಮತ್ತು ಪವನ ಮೂಲಗಳಿಂದಲೇ ಪಡೆದುಕೊಳ್ಳುತ್ತಿದೆ. ಒಂದು ವೇಳೆ ನಮ್ಮ ಕೇಂದ್ರ ಮತ್ತು ರಾಜ್ಯ ಸರಕಾರಗಳು, ತಮ್ಮ ಒಟ್ಟು ಸ್ಥಾಪಿತ ಸಾಮರ್ಥ್ಯದ ಶೇಕಡಾ 10ರಷ್ಟು ವಿದ್ಯುತ್ತನ್ನು, ತಕ್ಷಣದ ಭವಿಷ್ಯದಲ್ಲಿ ಸೌರ ವಿದ್ಯುತ್ ಸ್ಥಾವರಗಳಿಂದಲೇ ಉತ್ಪಾದಿಸಬೇಕೆಂದು ನಿರ್ಧರಿಸಿ ಅದನ್ನು ಸಾಧಿಸಿದ್ದೇ ಆದಲ್ಲಿ, ದೇಶದ ವಿದ್ಯುತ್ ಕ್ಷೇತ್ರದಲ್ಲಿ ಅದು ಹೊಸ ಅರುಣೋದಯವಾದಂತೆ.