ನವದೆಹಲಿ: ಚೀನಾದ ವುಹಾನ್ನಿಂದ ಭಾರತಕ್ಕೆ ಬಂದಿದ್ದ 406 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿಲ್ಲ ಎಂದು ಐಟಿಬಿಪಿ ಸ್ಪಷ್ಟಪಡಿಸಿದೆ.
ಕೊರೊನಾ ಸೋಂಕಿನ ಕೇಂದ್ರ ಬಿಂದುವಾಗಿದ್ದ ಚೀನಾದ ವುಹಾನ್ನಿಂದ 406 ಭಾರತೀಯರನ್ನು ಕರೆತಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಚಾವ್ಲಾ ಶಿಬಿರದಲ್ಲಿ (ITBP) ಇರಿಸಲಾಗಿತ್ತು. ಇವರ ಆರೋಗ್ಯ ಪರೀಕ್ಷಿಸಿ, ರಕ್ತದ ಮಾದರಿ ಸಂಗ್ರಹಿಸಿದ್ದ ವೈದ್ಯರ ತಂಡ ಯಾರಲ್ಲೂ ಕೊರೊನಾ ಸೋಂಕು ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಭಾರತೀಯರಲ್ಲದೆ ಮಾಲ್ಡೀವ್ಸ್‌ನ ಏಳು ಮಂದಿ ಮತ್ತು ಒಬ್ಬ ಬಾಂಗ್ಲಾದೇಶದ ಪ್ರಜೆ ಕೂಡ ಇದ್ದಾರೆ. ಐಟಿಬಿಪಿಯಲ್ಲಿ ಇರುವವರಲ್ಲಿ ಇಂದು ಯಾವುದೇ ಹೊಸ ಲಕ್ಷಣಗಳು ಗೋಚರಿಸಿಲ್ಲ. ಆಹಾರ, ಹಾಸಿಗೆ ಮತ್ತು ಇತರೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ. ಸಾಕಷ್ಟು ಪ್ರಮಾಣದ ಔಷಧಿಗಳನ್ನೂ ಸಹ ಕೇಂದ್ರದಲ್ಲಿ ಇರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ತಂಡಗಳು ಭೇಟಿ ನೀಡುತ್ತಿದ್ದು, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದು ಒದಗಿಸಲಾದ ಸೌಲಭ್ಯದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಈ ಹಿಂದೆ ಸಫ್ದರ್ಜಂಗ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದ ಏಳು ಮಂದಿ ಕೂಡ ಐಟಿಬಿಪಿ ಕೇಂದ್ರಕ್ಕೆ ಮರಳಿದ್ದಾರೆ. ವೈದ್ಯರ ಸೂಚನೆ ಪ್ರಕಾರ, ನಿಯಮಿತವಾಗಿ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಪರಿಸ್ಥಿತಿ ಎದುರಾದರೆ ಚಿಕಿತ್ಸೆ ನೀಡುವ ಸಲುವಾಗಿ ನಾಲ್ಕು ಪ್ರತ್ಯೇಕ ಹಾಸಿಗೆಗಳು ಸಿದ್ಧವಿದೆ. ಜೊತೆಗೆ ನಾಲ್ಕು ಆಂಬ್ಯುಲೆನ್ಸ್‌ಗಳು ಲಭ್ಯವಿದೆ ಎಂದು ತಿಳಿಸಿದೆ.