ನವದೆಹಲಿ: ಏರ್ಟೆಲ್ ಕಂಪನಿಯು 179 ರೂ. ಮೊತ್ತದ ಪ್ರಿಪೇಯ್ಡ್ ಪ್ಲಾನ್ವೊಂದನ್ನು ಪರಿಚಯಿಸುವುದರ ಜೊತೆಗೆ 2 ಲಕ್ಷ ರೂ. ಭಾರತಿ ಅಕ್ಸಾ ಲೈಫ್ ಇನ್ಶೂರೆನ್ಸ್ ವಿಮಾ ಪಾಲಿಸಿಯನ್ನೂ ಗ್ರಾಹಕರಿಗೆ ನೀಡಲಿದೆ ಎಂದು ತಿಳಿಸಿದೆ.
ಇದೊಂದು ರೀಚಾರ್ಜ್ ಪ್ಯಾಕ್ ಆಗಿದೆ. ಇದರ ಜೊತೆ ಭಾರ್ತಿ ಏರ್ಟೆಲ್ ಕಂಪನಿಯು ಭಾರತಿ ಅಕ್ಸಾ ಲೈಫ್ ಇನ್ಶೂರೆನ್ಸ್ (Bharti AXA Life Insurance) ನೀಡುತ್ತಿರುವುದು ವಿಶೇಷವಾಗಿದೆ. ಈ ಒಂದು ಪ್ರಿಪೇಯ್ಸ್ ಪ್ಲಾನ್ನಲ್ಲಿ ಯಾವುದೇ ನೆಟ್ವರ್ಕ್ಗೆ ಅನಿಯಮಿತ ಕರೆ ಮಾಡಬಹುದಾಗಿದೆ. 2ಜಿಬಿ ಡೇಟಾ, 300 ಎಸ್ಎಂಎಸ್ ಜೊತೆಗೆ ಭಾರ್ತಿ ಆಕ್ಸಾಲೈಫ್ ಇನ್ಶುರೆನ್ಸ್ನಿಂದ 2 ಲಕ್ಷ ರೂ.ಗಳ ಟರ್ಮ್ ಲೈಫ್ ಕವರ್ ನೀಡಲಾಗುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ಯಾಕ್ 28 ದಿನಗಳ ಮಾನ್ಯತೆ ಹೊಂದಿದೆ. ಸ್ಮಾರ್ಟ್ಫೋನ್ ಬಳಕೆದಾರರು, ಅರೆ ನಗರ ಮತ್ತು ಗ್ರಾಮೀಣ ಮೊಬೈಲ್ ಬಳಕೆದಾರರನ್ನು ಗುರಿಯಾಗಿಸಿ ಈ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ವಿಮಾ ಸೌಲಭ್ಯವು 18 ರಿಂದ 54 ವರ್ಷದೊಳಗಿನ ಜನರಿಗೆ ಲಭ್ಯವಿರುತ್ತದೆ. ಇದಕ್ಕಾಗಿ ಯಾವುದೇ ಕಾಗದದ ದಾಖಲೆಗಳು ಅಥವಾ ವೈದ್ಯಕೀಯ ಪರೀಕ್ಷೆ ಅಗತ್ಯವಿರುವುದಿಲ್ಲ. ವಿಮಾ ಪಾಲಿಸಿ ಅಥವಾ ಪ್ರಮಾಣಪತ್ರವನ್ನು ಡಿಜಿಟಲ್ ರೂಪದಲ್ಲಿ ಕಳುಹಿಸಲಾಗುತ್ತದೆ. ಈ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಮೂಲಕ ಗ್ರಾಹಕರು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳಲು ಮತ್ತು ತಮ್ಮ ಕುಟುಂಬವನ್ನು ಆರ್ಥಿಕವಾಗಿ ಸದೃಢವಾಗಿಸಿಕೊಳ್ಳಲು ಸರಳ ಮತ್ತು ಅನುಕೂಲಕರ ಮಾರ್ಗವನ್ನು ಏರ್ಟೆಲ್ ಒದಗಿಸುತ್ತಿದೆ ಎಂದು ಭಾರ್ತಿ ಏರ್ಟೆಲ್ ಕಂಪನಿ ಹೇಳಿಕೊಂಡಿದೆ.