ನವದೆಹಲಿ : ಕೊರೊನಾದಿಂದ ಗುಣ ಮುಖವಾದ ಬಳಿಕ ಪ್ಲಾಸ್ಮಾ ದಾನ ಮಾಡುವ ಮೂಲಕ ಏಮ್ಸ್ನ ನರ್ಸಿಂಗ್ ಅಧಿಕಾರಿ ಲೋಕೇಶ್ ಅವರ 18 ವರ್ಷದ ಮಗ ಧ್ರುವ ಪ್ಲಾಸ್ಮಾ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಕೊರೊನಾ ಗೆದ್ದು ಒಂದು ತಿಂಗಳ ಬಳಿಕ ಜುಲೈ 13 ರಂದು ಪ್ಲಾಸ್ಮಾ ದಾನ ಮಾಡುವುದಕ್ಕಾಗಿ ಇವರಿಬ್ಬರು ಏಮ್ಸ್ಗೆ ಆಗಮಿಸಿದ್ದು, ಮಗ ಪ್ಲಾಸ್ಮಾ ದಾನ ಮಾಡಿದರೆ, ತಂದೆ ರಕ್ತದಾನ ಮಾಡಿದ್ದಾರೆ. ಈ ಮೂಲಕ ಇಬ್ಬರೂ ಕೋವಿಡ್ ಸರ್ವೈವರ್ಸ್ ಎನಿಸಿಕೊಂಡಿದ್ದಾರೆ.
ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇದುವರೆಗೆ 9 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಆದರೆ, ಶುಭ ಸಂಕೇತ ಎಂದರೆ, ಸಕ್ರಿಯ ಪ್ರಕರಣಗಳಿಗಿಂತ ಚೇತರಿಕೆಯ ಪ್ರಮಾಣ ಹೆಚ್ಚಿದೆ. ಇದುವರೆಗೆ ಸುಮಾರು 5 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಇವೆಲ್ಲದರ ಮಧ್ಯೆ ಕೋವಿಡ್ ಗುಣಪಡಿಸಲು ಸಹಕಾರಿಯಾಗಿರುವ ಪ್ಲಾಸ್ಮಾ ಪಡೆಯಲು ಪರದಾಡಬೇಕಿದೆ. ಈ ಸಮಸ್ಯೆಯನ್ನು ಬಗೆಹರಿಸಲು ದೆಹಲಿಯ ಏಮ್ಸ್ ಒಂದು ಉಪಕ್ರಮ ಮಾಡಿದೆ. ಪ್ಲಾಸ್ಮಾ ದಾನಿಗಳ ಟ್ರ್ಯಾಕಿಂಗ್ ಅಪ್ಲಿಕೇಶನ್‌ನ ಸಹಾಯದಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರ ಹೆಸರುಗಳನ್ನು ಪಟ್ಟಿ ಮಾಡಿದೆ. ಈ ಮೂಲಕ ಗುಣಮುಖರಾದವರನ್ನು ಪತ್ತೆ ಹಚ್ಚಿ ಪ್ಲಾಸ್ಮಾ ದಾನಕ್ಕೆ ಮನವೊಲಿಸಲಾಗುತ್ತಿದೆ.
ತಂದೆ ರಕ್ತದಾನ ಮತ್ತು ಮಗ ಪ್ಲಾಸ್ಮಾ ದಾನ ಮಾಡಿದರು:
ಕೊರೊನಾದಿಂದ ಮುಕ್ತರಾದ ಒಂದು ತಿಂಗಳ ಬಳಿಕ ಜುಲೈ 13 ರಂದು ಪ್ಲಾಸ್ಮಾ ದಾನ ಮಾಡುವುದಕ್ಕಾಗಿ ನರ್ಸಿಂಗ್ ಅಧಿಕಾರಿ ಮತ್ತು ಅವರ ಮಗ ಏಮ್ಸ್ಗೆ ಆಗಮಿಸಿದ್ದರು. 18 ವರ್ಷದ ಮಗ ಧ್ರುವ ಪ್ಲಾಸ್ಮಾ ದಾನ ಮಾಡಿದರೆ, 45 ವರ್ಷದ ತಂದೆ ರಕ್ತದಾನ ಮಾಡಿದ್ದಾರೆ.
ತಂದೆ-ಮಗನಿಗೆ ಒಟ್ಟಿಗೆ ಪಾಸಿಟಿವ್ ಬಂದಿತ್ತು :
ಆರಂಭದಲ್ಲಿ ಲೋಕೇಶ್ ಅವರ ಮಗ 18 ವರ್ಷದ ಧ್ರುವ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ಏಮ್ಸ್‌ನಲ್ಲಿ ಪರೀಕ್ಷೆಗೆ ಕಾಯದೇ ಅವರು ಖಾಸಗಿ ಲ್ಯಾಬ್ನಲ್ಲಿ ಮಗನ ಪರೀಕ್ಷೆ ಮಾಡಿಸಿ ವರದಿ ಪಡೆದಿದ್ದರು. ವರದಿಯಲ್ಲಿ ಮಗನಿಗೆ ಪಾಸಿಟಿವ್ ಬಂದ ಹಿನ್ನೆಲೆ ಲೋಕೇಶ್ ಸ್ವತಃ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ, ಅವರಿಗೂ ಪಾಸಿಟಿವ್ ಬಂದಿತ್ತು. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಲೋಕೇಶ್ ಅವರ 80 ವರ್ಷದ ತಾಯಿಗೆ ನೆಗೆಟಿವ್ ಬಂದಿತ್ತು. ಪಾಸಿಟಿವ್ ಬಂದ ತಂದೆ ಮಗನಿಗೆ ಜೂನ್ 6 ರಂದು ಏಮ್ಸ್‌ನಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿತ್ತು. ಜೂನ್ 13 ರಂದು ಇಬ್ಬರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಇದಾಗಿ ಒಂದು ತಿಂಗಳ ಬಳಿಕ ಪ್ಲಾಸ್ಮಾ ದಾನ ಮಾಡಿದ್ದಾರೆ.
ಲೋಕೇಶ್ ಜೂನ್ 26 ರಂದು ಕರ್ತವ್ಯಕ್ಕೆ ಮರಳಿದರು :
ಕೊರೊನಾ ಸೋಲಿಸಿದ ಬಳಿಕ ಜೂನ್ 26 ರಂದು ಲೋಕೇಶ್ ಕರ್ತವ್ಯಕ್ಕೆ ಮರಳಿದ್ದಾರೆ. ಬಳಿಕ ಅವರು ತಮ್ಮ ಸಹೋದ್ಯೋಗಿಗಳಿಗೂ ಪ್ಲಾಸ್ಮಾ ದಾನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಮತ್ತೊಂದೆಡೆ ಅವರ ಮಗ ಪ್ಲಾಸ್ಮಾ ದಾನ ಮಾಡಿದ ಅತ್ಯಂತ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಪ್ಲಾಸ್ಮಾ ದಾನ ಮಾಡಲು ಮನವಿ:
ಏಮ್ಸ್ ಕಾರ್ಡಿಯೋ ರೇಡಿಯೋ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರಿಂದರ್ ಸಿಂಗ್ ಮಾತನಾಡಿ, ಭಾರತದಾದ್ಯಂತ ಸುಮಾರು 9 ಲಕ್ಷ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಐದಾರು ಲಕ್ಷ ರೋಗಿಗಳು ಗುಣಮುಖರಾಗಿದ್ದಾರೆ. ಈ ಅರ್ಧ ಮಿಲಿಯನ್ ಜನ ಪ್ಲಾಸ್ಮಾ ದಾನ ಮಾಡಿದರೆ, ಬಹುತೇಕ ಎಲ್ಲ ರೋಗಿಗಳನ್ನು ಗುಣಪಡಿಸಬಹುದು. ಪ್ಲಾಸ್ಮಾ ಮಧ್ಯಮ ಮತ್ತು ತೀವ್ರತರವಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಏಕೈಕ ಮಾರ್ಗವಾಗಿದೆ. ಆದ್ದರಿಂದ ಎಲ್ಲರೂ ಮುಂದೆ ಹೋಗಿ ಪ್ಲಾಸ್ಮಾ ದಾನ ಮಾಡುವಂತೆ ಮನವಿ ಮಾಡಿದ್ದಾರೆ.