ಮುಂಬೈ: ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ ಪುತ್ರ ವಿಹಾಂಗ್ ಅವರನ್ನು 5 ಗಂಟೆಗಳ ನಿರಂತರ ವಿಚಾರಣೆಯ ಬಳಿಕ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಿಡುಗಡೆಗೊಳಿಸಿ ಕಳುಹಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧದಲ್ಲಿ ಇಡಿ ಅಧಿಕಾರಿಗಳು ವಿಚಾರಣಗೆ ಕಚೇರಿಗೆ ಕರೆಸಿಕೊಂಡಿದ್ದರು. ಈ ಪ್ರಕರಣ ಸಂಬಂಧ ಸತತ 5 ಗಂಟೆಗಳ ವಿಚಾರಣೆ ನಡೆಸಿದ್ದಾರೆ.
ಇದಕ್ಕೂ ಮೊದಲು ಥಾಣೆ ಹಾಗೂ ಮುಂಬೈನಲ್ಲಿರುವ ಶಾಸಕ ಪ್ರತಾಪ್ ಅವರಿಗೆ ಸಂಬಂಧಿಸಿರುವ ವಿವಿಧ 10 ಸ್ಥಳಗಳ ಮೇಲೆ ಇಡಿ ಅದಿಕಾರಿಗಳು ದಾಳಿ ನಡೆಸಿದ್ದರು. ಬಳಿಕ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿ ಅವರ ಪುತ್ರನನ್ನು ವಿಚಾರಣೆಗೆ ಒಳಪಡಿಸಿದ್ದರು.
ಪ್ರತಾಪ್ ಸರ್ನಾಯಕ್ ಥಾಣೆಯ ಓವಲ್ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇತ್ತೀಚಿಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿದ್ದ ವಿನ್ಯಾಸಕಾರನ ಆತ್ಮಹತ್ಯೆ ಪ್ರಚೋಧನೆ ಪ್ರಕರಣ ಸಂಬಂಧ, ಕೇಸ್ ರೀ ಓಪನ್ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಇವರಲ್ಲದೆ ಮುಂಬೈ ಅನ್ನು ಪಾಕಿಸ್ತಾನ ಎಂದಿದ್ದ ಕಂಗನಾ ರಣಾವತ್ ವಿರುದ್ಧವೂ ಕಾನೂನಾತ್ಮಕ ಕ್ರಮಕ್ಕೆ ಆಗ್ರಹಿಸಿ ಪತ್ರ ಬರೆದಿದ್ದರು. ಇದೇ ಕಾರಣಕ್ಕಾಗಿ ಬಿಜೆಪಿ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಶಿವಸೇನೆ ಆರೋಪಿಸಿದೆ.
ಇದನ್ನೂ ಓದಿ: ಕಂಗನಾ ವಿರುದ್ಧ ದೇಶದ್ರೋಹ ಕೇಸ್ಗೆ ಒತ್ತಾಯಿಸಿದ್ದ ಶಿವಸೇನೆ ಮುಖಂಡನ ಮನೆ ಮೇಲೆ ಇಡಿ ದಾಳಿ